ಚನ್ನರಾಯಪಟ್ಟಣ: ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪೋಷಿಸುವ ನಿಟ್ಟಿನಲ್ಲಿ ಪ್ರತಿಭಾ ಕಾರಂಜಿ ಒಂದು ಉತ್ತಮ ವೇದಿಕೆಯಾಗಿದೆ ಎಂದು ಆದಿಚುಂಚನಗಿರಿ ಹಾಸನ ಶಾಖಾಮಠದ ಶ್ರೀ ಶಂಭುನಾಥಸ್ವಾಮೀಜಿ ಹೇಳಿದರು.
ತಾಲೂಕಿನ ಶೀಕ್ಷೇತ್ರ ಕಬ್ಬಳಿ ಶ್ರೀ ಬಸವೇಶ್ವರಸ್ವಾಮಿ ಆಂಗ್ಲ
ಮಾಧ್ಯಮ ಶಾಲೆಯ ಆವರಣದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಹೋಬಳಿ ಮಟ್ಟದ ಫ್ರೌಢಶಾಲೆಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ತಮ್ಮ ಮನಸ್ಸಿನಲ್ಲಿರುವ ಕಲೆಯನ್ನು ವೇದಿಕೆಯ ಮೇಲೆ
ಪ್ರದರ್ಶಿಸಲು ಉತ್ತಮ ಅವಕಾಶವಿದ್ದು ವಿದ್ಯಾರ್ಥಿಗಳು ಸದ್ಬಳಕೆ
ಮಾಡಿಕೊಳ್ಳಬೇಕು. ವೇಗವಾಗಿ ಚಲಿಸುತ್ತಿರುವ ವಿಶಾಲ
ಪ್ರಪಂಚದಲ್ಲಿ ಪ್ರತಿಯೊಂದಕ್ಕೂ ಸ್ವರ್ಧೆ ಇದೆ ಎಂದರು.
ಸ್ವರ್ಧೆ ಎಂದಮೇಲೆ ಪೈಪೋಟಿ ಮಾಮೂಲು. ಸೋಲು ಹಾಗೂ ಗೆಲುವು ಎಂಬುದು ಒಂದೇ ನಾಣ್ಯದ ಎರಡು
ಮುಖಗಳಿದ್ದಂತೆ. ಗೆದ್ದವರಿಗೆ ಬಹುಮಾನ ಸಿಗಬಹುದು ಆದರೆ
ಸೋತವರಿಗೆ ಅನುಭವದ ಜತೆಗೆ ಛಲ ಹಾಗೂ ಹಂಬಲ ಹೆಚ್ಚಲಿದೆ. ಸೋಲೇ ಗೆಲುವಿನ ಸೋಪಾನ ಎಂದು ಕಿವಿಮಾತು ಹೇಳಿದರು.
ಓದು ಹಾಗೂ ಬರೆಯುವುದೇ ಶಿಕ್ಷಣವಲ್ಲ. ಅದರಿಂದಾಚೆಗೆ
ಪಠ್ಯೇತರ ಸಮಗ್ರ ಚಟುವಟಿಕೆಯೂ ಸೇರಿದಾಗ ಶಿಕ್ಷಣ ಪೂರ್ಣವಾಗುತ್ತದೆ. ಅನುಭವದ ಕಲಿಕೆ ಮುಖ್ಯ. ಅವಕಾಶ ಸಿಕ್ಕಲ್ಲಿ ಸಾಧಿಸು, ಸಾಯುವವರೆಗೂ ಸಾಧಿಸು. ಹೆಸರು ಹಾಗೂ ಕೀರ್ತಿ ಸಂಪಾದಿಸು ಸಂಪತ್ತು ತಾನಾಗಿಯೇ ಬರುತ್ತದೆ ಎಂದರು.
ಕ್ಷೇತ್ರ ಶಿಕ್ಷಾಣಾಧಿಕಾರಿ ಎಚ್.ಎಸ್.ದೀಪಾ ಮಾತನಾಡಿ, ಜ್ಞಾನ ಎಂಬುದು ಯಾರ ಸೊತ್ತೂ ಅಲ್ಲ. ಗಳಿಸಿದಷ್ಟು ಅಪಾರ ಕೀರ್ತಿ, ಹೆಸರು ಹಾಗೂ ಉತ್ತಮ ಭವಿಷ್ಯ ನಿಮ್ಮದಾಗಲಿದೆ. ಪ್ರತಿಭೆ ಇದ್ದವರಿಗೆ ಎಂದಿಗೂ ಅವಕಾಶ ಇದ್ದೇ ಇರಲಿದೆ ಎಂದರು.
ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಹೋಬಳಿ ವ್ಯಾಪ್ತಿಯ 13 ಫ್ರೌಢಶಾಲೆಗಳಿಂದ 35೦ ವಿದ್ಯಾರ್ಥಿಗಳು ಪಾಲ್ಗೊಂಡಿದ್ದು ಏಕಪಾತ್ರ ಅಭಿನಯ, ಆಶುಭಾಷಣ, ಕಂಠಪಾಠ, ಛದ್ಮವೇಷ ಸೇರಿದಂತೆ 3೦ಕ್ಕೂ ಹೆಚ್ಚು ಸ್ವರ್ಧೆಗಳು ಜರುಗಿದವು.
ಕಬ್ಬಳಿ ಶಾಖಾ ಮಠದ ಶ್ರೀ ಶಿವಪುತ್ರನಾಥ ಸ್ವಾಮೀಜಿ, ಶಿಕ್ಷಣ
ಸಂಯೋಜಕ ಎಸ್.ಶ್ರೀನಿವಾಸ್, ಸಮೂಕ ಸಂಪನ್ಮೂಲ ವ್ಯಕ್ತಿ
ಕೆ.ಎನ್.ಮಂಜುನಾಥ್, ಇಸಿಒಗಳಾದ ಶಿವಾನಂದ್ ಮತ್ತು
ಯದುಕುಲರಾಜ್. ಶಾಲಾ ಮುಖ್ಯಶಿಕ್ಷಕ ಟಿ.ತಿಮ್ಮೇಗೌಡ ಹಾಗೂ ಎಲ್ಲ ಶಾಲೆಗಳ ಮುಖ್ಯಶಿಕ್ಷಕರು ಇದ್ದರು.