ಚನ್ನರಾಯಪಟ್ಟಣ: ತಾಲೂಕಿನ ಪುರಾಣ ಪ್ರಸಿದ್ಧ ಶ್ರೀಕ್ಷೇತ್ರ ಕಬ್ಬಳಿ ಶ್ರೀ ಬಸವೇಶ್ವರಸ್ವಾಮಿ ಸನ್ನಿಧಿಯಲ್ಲಿ ಧನುರ್ಮಾಸ ಪ್ರಯುಕ್ತ ಬಸವ ಮಾಲಾಧಾರಿಗಳ ಮಡಿ ಪೂಜೆಗೆ ಆದಿಚುಂಚನಗಿರಿ ಹಾಸನ ಶಾಖಾಮಠದ ಶ್ರೀ ಶಂಭುನಾಥಸ್ವಾಮೀಜಿ ಭಾನುವಾರ ರಾತ್ರಿ ಚಾಲನೆ ನೀಡಿದರು.
ಸಂಜೆ ಶ್ರೀಕ್ಷೇತ್ರಕ್ಕೆ ಆಗಮಿಸಿದ ಶ್ರೀ ಶಂಭುನಾಥಸ್ವಾಮೀಜಿ ಅವರನ್ನು ಗ್ರಾಮಸ್ಥರು ಪಾದಪೂಜೆ ನೆರವೇರಿಸಿ ಪೂರ್ವಕುಂಭದೊಂದಿಗೆ ಸ್ವಾಗತಿಸಿದರು. ಮೊದಲಿಗೆ ಶ್ರೀಗಳು ವಿಘ್ನೇಶ್ವರ ಹಾಗೂ ಗಂಗಾಪೂಜೆ ನೆರವೇರಿಸಿದರು.
ಬಳಿಕ ಶ್ರೀ ಬಸವೇಶ್ವರಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಬಸವ
ಮೂರ್ತಿಗೆ ಕ್ಷೀರಾಭಿಷೇಕ ಮಾಡಿದರು. ನಂತರ ಮಂಗಳವಾಧ್ಯದೊಂದಿಗೆ ಸನ್ನಿಧಿಯ ಸಮೀಪದಲ್ಲಿರುವ ಮಜ್ಜನ ಬಾವಿಯ ಬಳಿಗೆ ಆಗಮಿಸಿದರು.
ಮಜ್ಜನ ಬಾವಿಯ ಕಟ್ಟೆಯ ಮೇಲೆ ಬಸವ ಕಲಶ ಪ್ರತಿಷ್ಠಾಪಿಸಿ ಹಸಿನೂಲು ಸುತ್ತಿ ಅರಿಶಿನ ಕುಂಕುಮದ ಅರ್ಚನೆ ಮಾಡಿ ವಿಶೇಷ ಪೂಜೆ ಸಲ್ಲಿಸಿದರು. ಮಜ್ಜನದ ಬಾವಿಯಿಂದ ಸನ್ನಿಧಿಗೆ ಕಲಶವನ್ನು ತಂದು ಹಸಿರು ಚಪ್ಪರದೊಂದಿಗೆ ವಿವಿಧ ಬಗೆಯ ಪುಷ್ಪ ಹಾಗೂ ತಳಿರು-ತೋರಣಗಳಿಂದ ಸಿಂಗರಸಿದ್ದ ಮಂಟಪದಲ್ಲಿ ಪ್ರತಿಷ್ಠಾಪಿಸಲಾಯಿತು.
9 ಮಂದಿ ಭಕ್ತರಿಗೆ ಶ್ರೀಗಳು ಬಸವ ಮಾಲಾಧಾರಣೆ ಮಾಡಿ ಆಶಿರ್ವದಿಸಿದರು. ಡಿ.15 ರಿಂದ ಜ.14 ರವರಗೆ ಧನುರ್ಮಾಸ ಪೂಜೆ ನಡೆಯಲಿದ್ದು ಸಾವಿರಾರು ಮಂದಿ ಭಕ್ತರು ಮಾಲೆ ಧರಿಸಿ ಪ್ರತಿದಿನ ಸನ್ನಿಧಿಯಲ್ಲಿ ಪೂಜೆ, ಜಪ ಹಾಗೂ ಭಜನೆ ಕೈಗೊಳ್ಳಲಿದ್ದು ಜ.14 ರ ಮುಂಜಾನೆ ಮಾಲಾ ವಿಸರ್ಜನೆ ಮಾಡಲಿದ್ದಾರೆ.
ಅಲ್ಲದೆ ಮಕರ ಸಂಕ್ರಾಂತಿಯ ಹಿಂದಿನ ದಿನವಾದ ಜ.13 ರಂದು
ಶ್ರೀಕ್ಷೇತ್ರಕ್ಕೆ ತುರುವೇಕೆರೆ, ನಾಗಮಂಗಲ, ತಿಪಟೂರು
ಸೇರಿದಂತೆ ಸುತ್ತಮುತ್ತಲ ಗ್ರಾಮದಿಂದ 101 ಕ್ಕೂ ಹೆಚ್ಚು
ಗ್ರಾಮದೇವತೆಗಳೊಂದಿಗೆ ಸಾವಿರಾರು ಸಂಖ್ಯೆಯಲ್ಲಿ
ಮಾಲಾಧಾರಿಗಳು ಆಗಮಿಸಲಿದ್ದು, ಪೂಜೆ, ಭಜನೆ ಹಾಗೂ ಪ್ರಸಾದ ವ್ಯವಸ್ಥೆ ಮಾಡಲಾಗುವುದು ಎಂದು ಶ್ರೀ ಶಂಭುನಾಥಸ್ವಾಮೀಜಿ ತಿಳಿಸಿದರು.
ಜ.13 ರಂದು ಸಂಜೆ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ ಮುತ್ತಿನ ಪಲ್ಲಕ್ಕಿ ಉತ್ಸವ, ಗುರುವಂದನೆ, ಗುರು ಆರಾಧನೆ ಹಾಗೂ ರಾತ್ರಿ ಪುಷ್ಕರಣಿಯಲ್ಲಿ ಚುಂಚಶ್ರೀಗಳ ತೆಪ್ಪೋತ್ಸೋವ ಜರುಗಲಿದ್ದು, ಮರುದಿನ ಬೆಳಗ್ಗೆ ಶ್ರೀಕ್ಷೇತ್ರಕ್ಕೆ ಆಗಮಿಸುವ ಗ್ರಾಮದೇವತೆಗಳಿಗೆ
ಮಡಿಲಕ್ಕಿ ಕಾರ್ಯಕ್ರಮ ನೆರವೇರಲಿದೆ ಎಂದರು.
ಆದಿಚುಂಚನಗಿರಿ ಶೃಂಗೇರಿ ಶಾಖಾಮಠದ ಶ್ರೀ ಗುಣನಾಥಸ್ವಾಮೀಜಿ, ಶ್ರೀಕ್ಷೇತ್ರ ಕಬ್ಬಳಿ ಶಾಖಾಮಠದ ಶ್ರೀ ಶಿವಪುತ್ರನಾಥ ಸ್ವಾಮೀಜಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶಿವನಂಜೇಗೌಡ, ಸದಸ್ಯ ಶ್ರೀಕಂಠು, ಗುಡಿಗೌಡ ಪ್ರಕಾಶ್, ಪ್ರಮುಖರಾದ ಗಣೇಶ್‌ಗೌಡ,ನಂದೀಶ್, ಸಿದ್ಧಗಂಗಾಧರಗೌಡ, ಬೋರೇಗೌಡ, ಶ್ರೀ ಬಸವೇಶ್ವರಸ್ವಾಮಿ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕ ವೃಂದ ಹಾಗೂ ಭಕ್ತರು ಪಾಲ್ಗೊಂಡಿದ್ದರು.