ಹಾಸನ: ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಸಚಿವ ಜಮೀರ್ ಅಹಮದ್ ಖಾನ್ ವಿರುದ್ಧ ವಕ್ಫ್ ವಿವಾದ ಸಂಬಂಧ ತೀವ್ರ ವಾಗ್ದಾಳಿ ನಡೆಸಿದ್ದು ಜಮೀರ್ ವಿರುದ್ಧ ನಾಲಿಗೆ ಹರಿಬಿಟ್ಟರು.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದೆಲ್ಲೆಡೆ ವಕ್ಫ್ ಬೋರ್ಡ್ ಕ್ಯಾನ್ಸರ್ ವೈರಸ್ ರೀತಿ ಹರಡುತ್ತಿದೆ. ಕಾಂಗ್ರೆಸ್ ಇವರಿಗೆ ಪವರ್ ಕೊಟ್ಟಿದೆ. ರಾಜ್ಯದಾದ್ಯಂತ 9 ಲಕ್ಷ 40 ಸಾವಿರ ಎಕರೆ ಜಾಗ ವಕ್ಫ್ ಬೋರ್ಡ್‌ಗೆ ಸೇರಿದೆ. ಹೀಗಾಗಿ ಕೇಂದ್ರ ಸರ್ಕಾರ ಕಲಂ 44ಕ್ಕೆತಿದ್ದುಪಡಿ ಮಾಡುವ ಪ್ರಕ್ರಿಯೆ ನಿರ್ಣಯ ಕೈಗೊಂಡಿತು.
ಆ ಕೂಡಲೇ ಸಚಿವ ಜಮೀರ್ ಅಹಮದ್ ತಮ್ಮ ಅಪ್ಪನ ಜಾಗ ಎಂದುಕೊಂಡು ಇಡೀ ರಾಜ್ಯದಾದ್ಯಂತ ಪ್ರವಾಸ ಮಾಡಿದ್ದಾರೆ. ಮುಖ್ಯಮಂತ್ರಿ ಸೂಚನೆ ಮೇರೆಗೆ ಬಂದಿದ್ದೇನೆ ಎಂದು ಜಿಲ್ಲಾಧಿಕಾರಿ, ಅಧಿಕಾರಿಗಳಿಗೆ ಧಮ್ಕಿ ಹಾಕಿ ವಕ್ಫ್ ಬೋರ್ಡ್‌ಗೆ ಆಸ್ತಿ ಮಾಡಿಸಿದ್ದಾರೆ ಎಂದು ಕಿಡಿಕಾರಿದರು.
ಸಿಎಂ ನೋಟೀಸ್ ವಾಪಾಸ್ ಪಡೆಯುತ್ತೇನೆ ಎಂದು ಹೇಳಿದರೆ ಸಾಲಲ್ಲ. ಎಲ್ಲವೂ ಅಷ್ಟಕ್ಕೆ ಮುಗಿಯುವುದಿಲ್ಲ. ಪಹಣಿಗಳು ಮರುತಿದ್ದುಪಡಿ ಆಗಬೇಕು ಎಂದು ಆಗ್ರಹಿಸಿದರು.
ಇದು ವ್ಯವಸ್ಥಿತವಾದ ಷಡ್ಯಂತ್ರ, ನಾವು ಕೇಂದ್ರ ಸರ್ಕಾರದ ನಿರ್ಣಯಕ್ಕೆ ಬೆಂಬಲವನ್ನು ಸೂಚಿಸುತ್ತಿದ್ದೇವೆ. ಎಲ್ಲರೂ ಪಹಣಿ ಪರಿಶೀಲಿಸಿಕೊಳ್ಳಲಿ ಎಂದು ಪ್ರತಿ ತಾಲ್ಲೂಕಿನಲ್ಲಿ ಅಭಿಯಾನ ಮಾಡುತ್ತೇವೆ ಎಂದರು.
ಗೋಮಾಳ, ದೇವಾಲಯ, ಶಾಲೆ, ಸ್ಮಶಾಶನ ಎಲ್ಲೆಡೆ ವಕ್ಫ್ ಬೋರ್ಡ್ ವೈರಸ್ ಹರಡುತ್ತಿದೆ. ಬಿಜೆಪಿ ಕಾಲದಲ್ಲಿ ಪಹಣಿ ತಿದ್ದುಪಡಿ ಆಗಿದ್ದರೂ ತಪ್ಪು ತಪ್ಪೇ, ಅದನ್ನು ಖಂಡಿಸುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಇಸ್ಲಾಂಮೀಕರಣ ಮಾಡುವ ಹಿನ್ನೆಲೆಯಲ್ಲಿ ಭೂಮಿ ಕಬಳಿಕೆ ಮಾಡಿ ಮುಸ್ಲಿಂ ಜನಸಂಖ್ಯೆ ಹೆಚ್ಚಳ ಮಾಡಲು ಪ್ರಯತ್ನಿಸುತ್ತಿದ್ದಾರೆ. ಮುಂದೆ ಕರ್ನಾಟಕದಲ್ಲಿ ಬರೀ ನಮಾಜ್ ಮಾಡೋದು, ಬುರ್ಕಾ ಹಾಕೊಳೊದೆ ಆಗುತ್ತೆ. ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಕಾಂಗ್ರೆಸ್‌ನವರೇ ಮುಂದೆ ನಿಮ್ಮ, ಮನೆ, ತೋಟ, ಜಮೀನು, ನಿಮ್ಮನ್ನೂ ಬಿಡುವುದಿಲ್ಲ. ಕೇವಲ ಓಟಿಗೋಸ್ಕರ ನೀವು ಈ ರೀತಿ ಮಾಡುತ್ತಿದ್ದೀರಿ ಎಂದು ವಾಗ್ದಾಳಿ ನಡೆಸಿದರು.
ದೇಶ ಉಳಿಯಬೇಕು, ನೀವು ನಿಮ್ಮ ಮಕ್ಕಳ ಆಸ್ತಿ ಉಳಿಯಬೇಕು ಎಂದರೆ ಕಾಂಗ್ರೆಸ್‌ನವರು ಕೂಡ ಕೇಂದ್ರ ಸರ್ಕಾರದ ನಿರ್ಣಯಕ್ಕೆ ಬೆಂಬಲ ಕೊಡಬೇಕು. ದೇಶ, ಸಮಾಜ, ಸಂಸ್ಕೃತಿ ಉಳಿಸಬೇಕು. ಜಮೀರ್ ಅಹಮದ್ ಅವರನ್ನು ಗಡಿಪಾರು ಮಾಡಿದರೆ ಸಾಲದು ಎಂದು ಕಿಡಿಕಾರಿದರು.
ಇಷ್ಟಾದರೂ ಸಚಿವ ಜಮೀರ್ ಅಹಮದ್ ಗುಪ್ತ ಸಭೆ ಮಾಡಿದ್ದಾರೆ. ಅವರು ಹೋರಾಟ ಮಾಡಲಿ ನೀವು ನಿಮ್ಮ ಕೆಲಸ ಮಾಡಿ ಎಂದು ಸೂಚನೆ ಕೊಟ್ಟಿದ್ದಾರೆ. ಮುಖ್ಯಮಂತ್ರಿಗಳೇ ಇದು ನಿಮ್ಮ ಬುಡಕ್ಕೇ ಬರುತ್ತದೆ ಎಂದು ಎಚ್ಚರಿಸಿದರು.