ರಾಜ ಪ್ರತ್ಯಕ್ಷ ದೇವತಾ, ಎಲ್ಲರ ಪ್ರೀತಿ, ವಿಶ್ವಾಸ ಗಳಿಸುವ ವ್ಯಕ್ತಿಗೆ ಹಾಸನಾಂಬೆ ಆಶೀರ್ವಾದ ದಯಪಾಲಿಸಲಿ; ಅಧಿದೇವತೆ ದರ್ಶನ ಪಡೆದು ಹಾರೈಸಿದ ನೊಣವಿನಕೆರೆ ಸ್ವಾಮೀಜಿ

ಹಾಸನ: ಡಿಸಿಎಂ ಡಿ.ಕೆ.ಶಿವಕುಮಾರ್ ಶ್ರದ್ಧೆಯಿಂದ ನಡೆದುಕೊಳ್ಳುವ ತಿಪಟೂರು ತಾಲ್ಲೂಕಿನ, ನೊಣವಿನಕೆರೆ ಶ್ರೀ ಕಾಡುಸಿದ್ದೇಶ್ವರ ಮಠದ ಶ್ರೀ ಶ್ರೀ ಕರಿವೃಷಭ ದೇಶಿ ಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ‘ಹಾಸನಾಂಬ ದೇವಿ ದರ್ಶನ ಪಡೆದು‌ ಎಲ್ಲರ ಪ್ರೀತಿ, ವಿಶ್ವಾಸ ಗಳಿಸುವಂತಹ ವ್ಯಕ್ತಿಗೆ ಹಾಸನಾಂಬೆ ಆಶೀರ್ವಾದ ದಯಪಾಲಿಸಲಿ’ ಎಂದರು.

ದೇವಿ ದರ್ಶನ ಪಡೆದು ಮಾತನಾಡಿದ ಅವರು, ತಾಯಿಯ ದರ್ಶನಕ್ಕೆ ಎಲ್ಲಾ ದಿಕ್ಕಿನಿಂದಲೂ ಭಕ್ತರು ಬರ್ತಿದ್ದಾರೆ. ಭಕ್ತರಿಗೆ ಆಯಸ್ಸು, ಅಂತಸ್ತು ಕೊಟ್ಟು ಕಾಪಾಡಲಿ. ಎಲ್ಲರಿಗೂ ಆಯುರ್, ಆರೋಗ್ಯ ನೀಡಲಿ ಎಂದರು.

ಈ ವರ್ಷ ಅತಿಯಾದ ಮಳೆ ಬಂದು ಹಾನಿಯಾಗಿದೆ. ಹಿಂದೆ ಕೋವಿಡ್ ಬಂದು ಮನುಷ್ಯರು ಕಷ್ಟ ಅನುಭವಿಸಿದರು. ಆದ್ದರಿಂದ ಆರೋಗ್ಯ, ಸಂಪತ್ತನ್ನು ತಾಯಿ ಎಲ್ಲರಿಗೂ ಕರುಣಿಸಲಿ. ನಮ್ಮ ದೇಶ ಕಾಯುವ ಸೈನಿಕರಿಗೆ ಶಕ್ತಿ, ಸಾಮರ್ಥ್ಯ ಕೊಡಲಿ ಎಂದರು.

ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ರಾಜ ಪ್ರತ್ಯಕ್ಷ ದೇವತಾ. ಆ ಅಷ್ಟೈಶ್ವರ್ಯ ಹಾಗೂ ಹಾಸನಾಂಬೆ ತಾಯಿ ಆಶೀರ್ವಾದದಿಂದ ನಿಷ್ಠೆ, ಶ್ರದ್ಧೆ ಉಳ್ಳಂತಹ, ಸರ್ವೇ ಜನೋ ಸುಖಿನಾ ಭವಂತು ಎಂದು ಎಲ್ಲರ ಪ್ರೀತಿ, ವಿಶ್ವಾಸ ಗಳಿಸುವಂತಹ ವ್ಯಕ್ತಿಗೆ ಆ ತಾಯಿ ಆಶೀರ್ವಾದ ದಯಪಾಲಿಸಲಿ ಅಂತಹ ಸೌಹಾರ್ದಯುತ ವ್ಯಕ್ತಿ, ಶಕ್ತಿ ನಮಗೆ ಸಿಗಲಿ ಎಂದು ಹಾರೈಸಿದರು.

Sri Sri Karivrishab Deshi Kendra Shivayogeeshwar Swamiji of Nonvinakere Sri Kadusiddeshwar Mutt of Tipatur Taluk had darshan of hassanamba Devi.