ಕನ್ನಡ ಫೋಸ್ಟ್ ಚನ್ನರಾಯಪಟ್ಟಣ: ಪಂಚಭೂತಗಳನ್ನು ಹೊಂದಿರುವ ಪರಿಸರದಲ್ಲಿ ಮಾತ್ರ ಸಕಲ ಜೀವರಾಶಿಗಳು ಆಶ್ರಯ ಪಡೆಯಲು ಸಾಧ್ಯ ಎಂದು ಆದಿಚುಂಚನಗಿರಿ ಶೃಂಗೇರಿ ಶಾಖಾ ಮಠದ ಶ್ರೀ ಗುಣನಾಥಸ್ವಾಮೀಜಿ ಹೇಳಿದರು.
ತಾಲೂಕಿನ ಪುರಾಣ ಪ್ರಸಿದ್ಧ ಶ್ರೀಕ್ಷೇತ್ರ ಕಬ್ಬಳಿ ಶ್ರೀ ಬಸವೇಶ್ವರಸ್ವಾಮಿ ಸನ್ನಿಧಿಯಲ್ಲಿ ಭಾನುವಾರ ರಾತ್ರಿ ಹಮ್ಮಿಕೊಂಡಿದ್ದ 123 ನೇ ಗುರು ತೋರಿದ ದಾರಿ ತಿಂಗಳ ಮಾಮನ ತೇರು ಕಾರ್ಯಕ್ರಮದಲ್ಲಿ ಮಾತನಾಡಿ, ಜೀವರಾಶಿಗಳು ಬದುಕಲು ಪಂಚಭೂತಗಳು ಅತ್ಯಾವಶ್ಯಕ ಎಂದು ಆಶಿರ್ವಚನ ನೀಡಿದರು.
ಭೂಮಿಯ ಮೇಲೆ ನೀರು, ಬೆಳಕು ಹಾಗೂ ಗಾಳಿಯಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಇಡೀ ಭೂಮಂಡಲವೇ ನಾಶವಾಲಿದೆ. ಆದ್ದರಿಂದ ಪಂಚಭೂತಗಳಿಗೆ ಕೆಡಕು ಆಗದಂತೆ ನಾವು ನೋಡಿಕೊಳ್ಳಬೇಕು ಎಂದು ತಿಳಿಸಿದರು.
ನದಿ, ಕೆರೆ-ಕಟ್ಟೆಗಳು ಸೇರಿದಂತೆ ಜಲಮೂಲಗಳಿಗೆ ಕಸ ಸುರಿಯುವುದು, ಗಿಡ-ಮರಗಳಿಗೆ ಸುಖಾಸುಮ್ಮನೆ ಬೆಂಕಿ ಹೊತ್ತಿಸುವುದು ಇಲ್ಲವೆ ಬುಡಕ್ಕೆ ಕೊಡಲಿ ಪೆಟ್ಟು ನೀಡುವುದು ಹಾಗೂ ಭೂತಾಯಿಯ ಒಡಲಿಗೆ ಹಾನಿಕಾರಕ ವಸ್ತುಗಳನ್ನು ಸೇರಿಸುವುದರಿಂದ ಜೀವರಾಶಿಗಳಿಗೆ ಮುಂದೊಂದು ದಿನ ದೊಡ್ಡ ಅಪಾಯವೇ ಕಾದಿದೆ ಎಂದು ಎಚ್ಚರಿಸಿದರು.
ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರು ಪಂಚಭೂತಗಳನ್ನು ಉಳಿಸಿಕೊಳ್ಳಬೇಕೆಂದು 5 ಕೋಟಿ ಸಸಿಗಳನ್ನು ನೆಡುವ ಸಂಕಲ್ಪ ಮಾಡಿದ್ದು ಅದರಂತೆಯೇ ಶ್ರೀ ಮಠವು ಪರಿಸರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದರು.
ಇತ್ತೀಚಿನ ದಿನಗಳಿಂದ ಕೃಷಿ ಚಟುವಟಿಕೆಯಲ್ಲಿ ಇನ್ನಿಲ್ಲದಂತೆ
ರಸಗೊಬ್ಬರ, ಕಳೆನಾಶಕ ಹಾಗೂ ಇತರೆ ಔಷಧಿ ಸಿಂಪಡಿಸುತ್ತಿರುವ ಪರಿಣಾಮ ಮಣ್ಣು ಫಲವತ್ತತೆ ಕಳೆದಿಕೊಂಡಿದೆ. ಇದರಿಂದ ನಾವು ಸೇವಿಸುವ ಆಹಾರದಲ್ಲಿ ವಿಷದ ಪ್ರಮಾಣ ಸಾಕಷ್ಟಿದೆ. ಹಿಂದೆ ನಮ್ಮ ಪೂರ್ವಿಕರು 100 ರಿಂದ 125 ವರ್ಷಗಳವರಗೆ ಬದುಕುತಿದ್ದರು. ಆದರೆ ಈಗಿನ ಪೀಳಿಗೆ ಸರಾದರಿ ಆಯಸ್ಸು 60 ರ ಹಾಸುಪಾಸಿಗೆ ಬಂದು ನಿಂತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಹಾಸನ ಶಾಖಾಮಠದ ಶ್ರೀ ಶಂಭುನಾಥಸ್ವಾಮೀಜಿ ಮಾತನಾಡಿ, ಮನುಷ್ಯ ತನ್ನ ದುರಾಸೆಯ ಬದುಕಿನಿಂದ ಹೊರಬಂದು ನಿಸ್ವಾರ್ಥದ ಜೀವನ ಪ್ರಾರಂಭಿಸಿ ಧರ್ಮ ಕಾರ್ಯಗಳಲ್ಲಿ ತೊಡಗಿಕೊಂಡಲ್ಲಿ ದೇವರ ಪಾದದಲ್ಲಿ ಮುಕ್ತಿ ಸಿಗಲಿದೆ ಎಂದರು.
ಪ್ರಕೃತಿಯ ಮಡಿಲಲ್ಲಿ ಉಸಿರನ್ನು ಸಾಲವಾಗಿ ಪಡೆದು ಬಂದಿರುವ ನಾವು ಹಿಂದಿರುಗುವಾಗ ಅದರ ಸಾಲವನ್ನು ಮರುಪಾವತಿಸಿಯೇ
ಪಯಣಿಸಿಬೇಕು. ಆದರೆ ಇದ್ದು ಹೋಗುವ ನಡುವಿನ ದಿನಗಳಲ್ಲಿ ನಮ್ಮ ಬದುಕಿನ ಶೈಲಿ, ಆಚರಣೆ ಹಾಗೂ ಅಳವಡಿಸಿಕೊಳ್ಳುವ ಮೌಲ್ಯಯುತ ಜೀವನ ಮುಂದಿನ ಪೀಳಿಗೆಗೆ ಮಾದರಿಯಾಗುವಂತೆ ಇರಬೇಕು ಎಂದು ತಿಳಿಸಿದರು.
ನಿಸ್ವಾರ್ಥದಿಂದ ಸೇವೆ ಸಲ್ಲಿಸುತ್ತಿರುವ 18 ಮಂದಿ ಆಶಾ
ಕಾರ್ಯಕರ್ತೆಯರನ್ನು ಸನ್ಮಾನಿಸಲಾಯಿತು. ಗುಂಗರುಮಳೆ ಗ್ರಾಮಸ್ಥರು ಭಜನೆ ಕಾರ್ಯಕ್ರಮ ನಡೆಸಿಕೊಟ್ಟರು.
ಶ್ರೀಕ್ಷೇತ್ರ ಕಬ್ಬಳಿ ಮಠದ ಶ್ರೀ ಶಿವಪುತ್ರನಾಥ ಸ್ವಾಮೀಜಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಶಿವನಂಜೇಗೌಡ, ಎನ್.ಆರ್.ರತ್ನರಾಜ್, ಸದಸ್ಯ ಶ್ರೀಕಂಠು, ಗುಡಿಗೌಡ ಪ್ರಕಾಶ್, ಪ್ರಮುಖರಾದ ಗಣೇಶ್‌ಗೌಡ, ನಂದೀಶ್, ಬೋರೇಗೌಡ ಹಾಗೂ ಇತರರು ಇದ್ದರು.