ಶರವೇಗದ ಕಾರು ಡಿಕ್ಕಿಯಾಗಿ ಗಾಳಿಯಲ್ಲಿ ಹಾರಿ ಬಿದ್ದ ಯುವ ಇಂಜಿನಿಯರ್!: ಆಘಾತಕಾರಿ ದೃಶ್ಯದ ಸಿಸಿಟಿವಿ ದೃಶ್ಯ ಇಲ್ಲಿದೆ

ಅಪಘಾತ ಎಸಗಿದ ನಂತರ ಕಾರು ಬಿಟ್ಟು ಪರಾರಿಯಾದ ಚಾಲಕ| ಕಾರಿನ ಬಾನೆಟ್ ಗೆ ಅಂಟಿಕೊಂಡ ಬೈಕನ್ನು ದೂರಕ್ಕೆ ಎಳೆದೊಯ್ದಿರುವ ಕಾರು ನುಜ್ಜುಗುಜ್ಜು

ಹಾಸನ: ಅತೀವೇಗವಾಗಿ ಬಂದ ಮಾರುತಿ ಸ್ವಿಫ್ಟ್ ಕಾರು ರಸ್ತೆ ದಾಟುತ್ತಿದ್ದ ಸ್ಕೂಟರ್ ಗೆ ಡಿಕ್ಕಿ ಹೊಡೆದಿದ್ದರಿಂದ ಬೈಕ್ ಸವಾರ ಗಾಳಿಯಲ್ಲಿ ಹಾರಿ ಕೆಳಗೆ ಬಿದ್ದು ಗಂ‌ಭೀರವಾಗಿ ಗಾಯಗೊಂಡ ಘಟನೆ ನಗರದ ಬಿ.ಎಂ. ರಸ್ತೆಯ ಜಿಲ್ಲಾ ಕಾರಾಗೃಹದ ಮುಂಭಾಗ ನಿನ್ನೆ ರಾತ್ರಿ 11.10ರ ಸುಮಾರಿನಲ್ಲಿ ನಡೆದಿದೆ.

ಮೈಸೂರಿನಲ್ಲಿ ಉದ್ಯೋಗದಲ್ಲಿರುವ ಇಂಜಿನಿಯರ್, ನಗರದ ಫೈಜಾನ್ (24) ಗಂಭೀರವಾಗಿ ಗಾಯಗೊಂಡಿದ್ದು ಖಾಸಗಿ ಆಸ್ಪತ್ರೆ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕಾರು ಚಾಲಕ ಕಾರನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಜೈಲ್ ಮುಂಭಾಗದ ಬಂಕ್ ನಲ್ಲಿ ಸ್ಕೂಟರ್ ಗೆ ಪೆಟ್ರೋಲ್ ಹಾಕಿಸಲು ಸ್ಕೂಟರ್ ತಿರುಗಿಸಿದ ಪೈಜಾನ್ ಗೆ ಸಂತೇಪೇಟೆ ಕಡೆಯಿಂದ ವೇಗವಾಗಿ ಬಂದ ಸ್ವಿಫ್ಟ್ ಕಾರು ಡಿಕ್ಕಿ ಹೊಡೆದಿದೆ.

ಗಾಯಾಳು ಫೈಜಾನ್ ಇತ್ತಿಚೇಗಷ್ಟೇ ಮೈಸೂರಿನಲ್ಲಿ ಇಂಜಿನಿಯರ್ ಕೆಲಸಕ್ಕೆ ಸೇರಿದ್ದರು. ಕಾರು ಚಾಲಕ ಮದ್ಯಪಾನದ ಮತ್ತಿನಲ್ಲಿ ಅತಿವೇಗವಾಗಿ ಚಲಾಯಿಸಿ ಡಿಕ್ಕಿ ಹೊಡೆದಿರುವ ಆರೋಪ ಕೇಳಿ ಬಂದಿದೆ.

ನಗರ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅಪಘಾತಕ್ಕೊಳಗಾದ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.