ಹಾಸನ, ಫೆಬ್ರವರಿ 15: ಮೈಸೂರು ಗಲಭೆ ಪ್ರಕರಣ ಮುಂದಿಟ್ಟುಕೊಂಡು ಬಿಜೆಪಿ ನಾಯಕರು ಕಾಂಗ್ರೆಸ್ ಮೇಲೆ ಮುಗಿಬಿದ್ದಿದ್ದರೆ ಮೈತ್ರಿ ಪಕ್ಷದ ನಿಲುವಿಗೆ ವ್ಯತಿಕ್ತವಾಗಿ ಮಾತನಾಡಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಮೈಸೂರು ಪ್ರಕರಣಕ್ಕೆ ಅನಗತ್ಯ ದೊಡ್ಡ ಮಟ್ಟದಲ್ಲಿ ಪ್ರಚಾರ ನೀಡುವುದು ಬೇಡ ಎಂದರು.
ಸಕಲೇಶಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಹಲವಾರು ಪ್ರಮುಖ ಸಮಸ್ಯೆಗಳಿದ್ದು, ಇಂತಹ ಪ್ರಕರಣಗಳನ್ನು ಕೇವಲ ರಾಜಕೀಯ ಲಾಭಕ್ಕೆ ಬಳಸಬಾರದು ಎಂದು ಸಲಹೆ ನೀಡಿದರು.
ಸಮಾಜಗಳ ನಡುವಿನ ಉದ್ವಿಗ್ನತೆ
ಮೈಸೂರಿನಲ್ಲಿ ನಡೆದ ಗಲಭೆಯ ಸಂದರ್ಭದಲ್ಲಿ, ಒಂದು ಸಮಾಜದವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಕಾರಣದಿಂದ ಮತ್ತೊಂದು ಸಮಾಜದವರು ಸರ್ಕಾರಿ ವಾಹನಗಳಿಗೆ ಕಲ್ಲು ತೂರಾಟ ನಡೆಸಲು ಮುಂದಾದರು. ಈ ಘಟನೆ ರಾಜ್ಯದಲ್ಲಿ ಅಶಾಂತಿ ವಾತಾವರಣವನ್ನು ನಿರ್ಮಾಣ ಮಾಡಲು ಕಾರಣವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ರಾಜಕೀಯ ಬಣ್ಣ ಮತ್ತು ಸರ್ಕಾರದ ನಿರ್ಧಾರಗಳು
“ಈ ಘಟನೆಗೆ ರಾಜಕೀಯ ಬಣ್ಣ ನೀಡಲಾಗಿದೆ. ಆದರೆ, ನಮ್ಮ ಗಮನ ರಾಜ್ಯದ ತೀರಾ ಗಂಭೀರ ಸಮಸ್ಯೆಗಳ ಕಡೆಗೆ ಇರಬೇಕು” ಎಂದು ಕುಮಾರಸ್ವಾಮಿ ಹೇಳಿದರು.
ರಾಜ್ಯದ ತೆರಿಗೆ ಸಂಗ್ರಹದ ಬಗ್ಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ 1,89,000 ಕೋಟಿ ರೂಪಾಯಿಗಳ ಸಂಗ್ರಹ ನಿರೀಕ್ಷೆ ಇಟ್ಟಿತ್ತು. ಆದರೆ, ಇನ್ನೂ 15,000 ಕೋಟಿ ರೂಪಾಯಿ ಕೊರತೆ ಎದುರಿಸುವ ಸಾಧ್ಯತೆ ಇದೆ. ಇದನ್ನು ತುಂಬಿಸುವ ಪ್ರಯತ್ನವಾಗಿ ಸಿಎಲ್-2, ಸಿಎಲ್-7 ಮತ್ತು ಸಿಲ್-9 ಅಡಿಯಲ್ಲಿ 500 ಹೊಸ ಮದ್ಯದಂಗಡಿಗಳಿಗೆ ಅನುಮತಿ ನೀಡಲು ಸರ್ಕಾರ ತಯಾರಾಗಿದೆ ಎಂದರು.
ಆದಾಯ ಸಂಗ್ರಹಕ್ಕೆ ಸರ್ಕಾರದ ಹೋರಾಟ
“1992ರಿಂದ ಇತ್ತಿಚಿನವರೆಗೆ ಇಂತಹ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ. ಆದರೆ, ಈ ಬಾರಿ ಸರ್ಕಾರ ಈ ಮಾರ್ಗವನ್ನು ಅನುಸರಿಸುತ್ತಿದೆ. ಈ ಬಗ್ಗೆ ಮುಖ್ಯಮಂತ್ರಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ” ಎಂದರು.
ಸಾಮಾನ್ಯ ಜನತೆಗೆ ಆಗುತ್ತಿರುವ ಆರ್ಥಿಕ ಹೊರೆ, ದರ ಏರಿಕೆ, ಸರ್ಕಾರದ ಹಣಕಾಸಿನ ನಿರ್ವಹಣೆಯ ಬಗ್ಗೆ ಸೂಕ್ತ ದಿಕ್ಕು ಕಲ್ಪಿಸಬೇಕಾಗಿದ್ದರೆ, ರಾಜಕೀಯ ನಾಯಕರು ಕ್ಷುಲ್ಲಕ ವಿಚಾರಗಳಿಗಿಂತ ಮುಖ್ಯ ಸಮಸ್ಯೆಗಳತ್ತ ಗಮನಹರಿಸಬೇಕು ಎಂದು ಕುಮಾರಸ್ವಾಮಿ ಅವರು ಸಲಹೆ ನೀಡಿದರು.