ಹಾಸನ ಗನ್ ಶಾಟ್ ಪ್ರಕರಣ; ಸ್ಥಳ ಪರಿಶೀಲಿಸಿದ ಐಜಿಪಿ ಡಾ.ಬೋರಲಿಂಗಯ್ಯ ಹೇಳಿದ್ದೇನು?

ಹಾಸನ: ಹೊಯ್ಸಳ ನಗರ ಬಡಾವಣೆಯಲ್ಲಿ ಇಬ್ಬರು ಗುಂಡೇಟಿನಿಂದ ಮೃತಪಟ್ಟ ಘಟನೆ ಬಗ್ಗೆ ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸುತ್ತೇವೆ ಎಂದು ದಕ್ಷಿಣ ವಲಯ ಐಜಿಪಿ ಡಾ.ಬೋರಲಿಂಗಯ್ಯ ಹೇಳಿದರು.

ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದ ನಂತರ ಮಾತನಾಡಿದ ಅವರು, ಇಂದು ಮಧ್ಯಾಹ್ನ 1.15 ರ ಸಮಯದಲ್ಲಿ ಬಡಾವಣೆ ಪೊಲೀಸ್ ಠಾಣೆಗೆ ಇಬ್ಬರು ಮೃತಪಟ್ಟಿರುವ ಬಗ್ಗೆ ಮಾಹಿತಿ ಬಂದಿದೆ. ಆನಂತರ ಎಸ್ಪಿ ಅವರು ಸ್ಥಳಕ್ಕೆ ಬಂದು ನೋಡಿದ್ದಾರೆ ಎಂದರು.

ಕಾರಿನಿಂದ ಹೊರಗೆ ಬಿದ್ದಿದ್ದ ಮೃತದೇಹ ಶರಾಫತ್ ಅಲಿ ಅವರದ್ದು. ಕಾರಿನೊಳಗೆ ಇದ್ದ ಮೃತದೇಹ ಆಸೀಫ್ ಅವರದ್ದು, ಅವರು ಮೂಲತಃ ಬೆಂಗಳೂರಿನವರು. ಇಬ್ಬರ ನಡುವೆ ವಾಗ್ವಾದ ನಡೆದಿರುವುದನ್ನು ಸ್ಥಳೀಯರು ನೋಡಿದ್ದಾರೆ. ಮೇಲ್ನೋಟಕ್ಕೆ ಗನ್ ಶಾಟ್ ರೀತಿ ಕಾಣುತ್ತಿದೆ.

ಇವರಿಬ್ಬರ ನಡುವೆ ರಿಯಲ್ ಎಸ್ಟೇಟ್ ವ್ಯವಹಾರ ಇತ್ತು ಎಂಬುದು ಕಂಡುಬಂದಿದೆ. ಆಸೀಫ್ ಅವರ ಗನ್‌ಗೆ ಲೈಸನ್ಸ್ ಇತ್ತು ಎಂದು ಹೇಳುತ್ತಿದ್ದಾರೆ. ಅಲ್ಲಿದ್ದ ಕಾರು ಶರಾಫತ್ ಅಲಿ ಅವರಿಗೆ ಸೇರಿದ್ದು ಎಂದರು. ಎಸ್ಪಿ ಮೊಹಮ್ಮದ್ ಸುಜೀತಾ ಇದ್ದರು.