ಪತ್ನಿಯನ್ನು ಮನೆಗೆ ಕಳುಹಿಸದ ಮಾವನನ್ನು‌ ಕೊಂದ ಅಳಿಯ!

ತಾನೇ ಕೊಂದ ಮಾವನ ಶವವನ್ನು ಆಸ್ಪತ್ರೆಗೆ ತಂದು ಪರಾರಿಯಾಗಲು ಯತ್ನಿಸಿದ ಅಳಿಯ

ಹಾಸನ: ಪತಿಯೊಂದಿಗೆ ಜಗಳವಾಡಿ ತವರು ಮನೆ ಸೇರಿದ್ದ ಪತ್ನಿಯನ್ನು ವಾಪಾಸ್ ಕಳುಹಿಸಲಿಲ್ಲ ಎಂದು ಕೋಪಗೊಂಡ ಅಳಿಯ ಕಂಠಪೂರ್ತಿ ಕುಡಿದು ಬಂದು ಮಾವನೊಂದಿಗೆ ಜಗಳ ತೆಗೆದು ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ಬೇಲೂರು ತಾಲ್ಲೂಕಿನ, ರಾಮೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

ತಮ್ಮಯ್ಯ (58) ಕೊಲೆಯಾಗಿದ್ದಾರೆ, ಬಲ್ಲೇನಹಳ್ಳಿ ಗ್ರಾಮದ ಜಗದೀಶ್ (40) ಹತ್ಯೆ ಮಾಡಿರುವ ಆರೋಪಿ.

ತಮ್ಮಯ್ಯ ಅವರ ಪುತ್ರಿಯನ್ನು ಜಗದೀಶ್ ಮದುವೆಯಾಗಿ ಹತ್ತು ವರ್ಷಗಳು ಕಳೆದಿದೆ‌. ಜಗದೀಶ್ ಕುಡಿತದ ದಾಸನಾಗಿದ್ದು ಪ್ರತಿನಿತ್ಯ ಕುಡಿದು ಬಂದು ಪತ್ನಿಯೊಂದಿಗೆ ಜಗಳವಾಡುತ್ತಿದ್ದ. ಇದರಿಂದ ಬೇಸತ್ತ ಪತ್ನಿ ಕೆಲ ದಿನಗಳ ಹಿಂದೆ ಪತಿ ಮನೆ ತೊರೆದು ತವರು ಮನೆ ಸೇರಿದ್ದಳು.

ಪತ್ನಿ ಮನೆಗೆ ವಾಪಾಸ್ ಬಾರದಿದ್ದಕ್ಕೆ ಜಗದೀಶ್ ಕೋಪಗೊಂಡಿದ್ದ. ಇಂದು ಕಂಠಪೂರ್ತಿ ಕುಡಿದ ಬಂದ ಜಗದೀಶ್ ಗ್ರಾಮದ ಬಳಿ ಕುರಿ, ದನಕರುಗಳನ್ನು ಮೇಯಲು ಬಿಟ್ಟು ಕಟ್ಟೆ ಮೇಲೆ ಮಲಗಿದ್ದ ಮಾವ ತಮ್ಮಯ್ಯನೊಂದಿಗೆ ಜಗಳ ತೆಗೆದಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿ ತಮ್ಮಯ್ಯನ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದು, ಅವರು ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.

ನಂತರ ತಮ್ಮಯ್ಯನ ಶವವನ್ನು ಬೇಲೂರು ಆಸ್ಪತ್ರೆಗೆ ತಂದು ಎದೆನೋವು ಕಾಣಿಸಿಕೊಂಡಿದೆ ಎಂದು ಆಸ್ಪತ್ರೆಯ ಸಿಬ್ಬಂದಿ ಬಳಿ ಹೇಳಿದ್ದಾನೆ. ಆಸ್ಪತ್ರೆಯ ವೈದ್ಯರು ತಮ್ಮಯ್ಯ ಅವರನ್ನು ತಪಾಸಣೆ ಮಾಡಿದಾಗ ಹಲ್ಲೆ ಮಾಡಿ ರಕ್ತಸ್ರಾವ ಆಗಿರುವುದು ಕಂಡುಬಂದಿದೆ. ಇದನ್ನು ಪ್ರಶ್ನಿಸಿದ ವೇಳೆ ಜಗದೀಶ್ ಆಸ್ಪತ್ರೆಯಿಂದ ತಪ್ಪಿಸಿಕೊಳ್ಳಲು‌ ಯತ್ನಿಸಿದ್ದಾನೆ.

ಕೂಡಲೇ ಸಾರ್ವಜನಿಕರು ಜಗದೀಶ್‌ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.