ಹಾಸನ: ಪ್ರದೇಶ ಕಾಂಗ್ರೆಸ್ ಸಮಿತಿ ಹಾಗೂ ಶೋಷಿತ ಸಮಯದಾಯಗಳ ಸಂಘಟನೆಗಳ ಒಕ್ಕೂಟದ ಅಡಿಯಲ್ಲಿ ಡಿ.5ರಂದು ನಗರದಲ್ಲಿ ಸ್ವಾಭಿಮಾನಿ ಸಮಾವೇಶದಲ್ಲಿ ಮಾಡುತ್ತಿದ್ದೇವೆ. ಇದು ಗುಣಾತ್ಮಕ ನಾಯಕತ್ವವನ್ನು ಬಲಪಡಿಸುವ ಸಮಾವೇಶವಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪ ಹೇಳಿದರು.
ನಗರದ ಎಸ್.ಎಂ.ಕೃಷ್ಣ ಬಡಾವಣೆಯಲ್ಲಿನ ಸ್ವಾಭಿಮಾನಿ ಸಮಾವೇಶ ಆಯೋಜನೆ ಸ್ಥಳದಲ್ಲಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಶೋಷಿತ ಸಮುದಾಯಗಳ ಸಂಘಟನೆಗಳ ಒಕ್ಕೂಟ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದರು. ಸ್ವಾಭಿಮಾನಿ ಸಮಾವೇಶ ಮಾಡುತ್ತೇವೆ ನೀವು ಭಾಗಿಯಾಗಬೇಕೆಂದು ಕೇಳಿದ್ದರು. ಸಿದ್ದರಾಮಯ್ಯ ಹಾಗೂ ನಾವು ನಲವತ್ತು ವರ್ಷಗಳಿಂದ ಶೋಷಿತರು, ಹಿಂದುಳಿದ ವರ್ಗಗಳು ಮಾಡುವ ಸಮಾವೇಶಗಳಲ್ಲಿ ಭಾಗಿಯಾಗುತ್ತಿದ್ದೇವೆ.
ಕೋಮುವಾದ, ಮತೀಯವಾದವನ್ನು ಅಳಿಸಿ ಸಂವಿಧಾನದವನ್ನು ಉಳಿಸಲು ಹೋರಾಟ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರು ಸಮಾವೇಶದಲ್ಲಿ ಭಾಗವಹಿಸುತ್ತೇನೆ ಎಂದು ಹೇಳಿದ್ದರು. ಇದರಲ್ಲಿ ಕಾಂಗ್ರೆಸ್‌ನ ಮುಖಂಡರು ಭಾಗವಹಿಸುತ್ತಿದ್ದಾರೆ ಎಂದರು.
ಹಲವು ವರ್ಷಗಳಿಂದ ಹಿಂದುಳಿದ ವರ್ಗಗಳು ಕಾಂಗ್ರೆಸ್ ಬೆಂಬಲಿಸುತ್ತಿದ್ದಾರೆ. ಕಾಂಗ್ರೆಸ್‌ನ ಚಿಹ್ನೆ, ಬಾವುಟಗಳನ್ನು ಹಾಕುತ್ತೇವೆ. ಅವರು ಅವರ ಚಿಹ್ನೆ, ಬಾವುಟಗಳನ್ನು ಹಾಕುತ್ತಾರೆ. ಎಲ್ಲರೂ ಕೂಡ ಒಪ್ಪಿದ್ದಾರೆ.
ಈ ವಿಷಯವನ್ನು ಎಐಸಿಸಿ ಅಧ್ಯಕ್ಷರ ಗಮನಕ್ಕೆ, ರಾಹುಲ್‌ಗಾಂಧಿ, ಕೆಪಿಸಿಸಿ ಅಧ್ಯಕ್ಷರ ಗಮನಕ್ಕೆ ತಂದಿದ್ದೇವೆ. ಆರು ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಭಾಗವಹಿಸುತ್ತಾರೆ. ಬೇರೆ ಜಿಲ್ಲೆಗಳಿಂದಲೂ ಜನರು ಬರುವ ಸಾಧ್ಯತೆ ಇದೆ. ಐದು ಲಕ್ಷ ಜನ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಸಂವಿಧಾನ ಬಲವರ್ಧನೆ, ಗುಣಾತ್ಮಕ ನಾಯಕತ್ವವನ್ನು ಬೆಂಬಲಿಸಲು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದರು.