ಬೆಂಗಳೂರು; ದೇಶದಲ್ಲಿ ಆತಂಕಕಾರಿಯಾಗಿ ಹೆಚ್ಚುತ್ತಿರುವ ವಿದ್ಯಾರ್ಥಿಗಳ ಆತ್ಮಹತ್ಯೆ ಕುರಿತು ಸಾಮಾಜಿಕ ಕಾರ್ಯಕರ್ತೆ ಸಪ್ನಾ ಸಿಂಗ್ ಮಲ್ಲೇಶ್ವರಂ ಪ್ರಥಮ ದರ್ಜೆ ಕಾಲೇಜು ಎನ್ಎಸ್ಎಸ್ ವಿದ್ಯಾರ್ಥಿಗಳೊಂದಿಗೆ ಸದಾಶಿವ ನಗರದ ಬಾಷ್ಯಂ ಸರ್ಕಲ್ ಸಿಗ್ನಲ್ ನಲ್ಲಿ ಜಾಗೃತಿ ಮೂಡಿಸಿದರು.
ಮಾಧ್ಯಮದೊಂದಿಗೆ ಮಾತನಾಡಿದ ಸಪ್ನಾ ಸಿಂಗ್ ಎನ್.ಸಿ. ಆರ್. ಬಿ. ನೀಡಿರುವ 2003ನೇ ಸಾಲಿನ ವರದಿ ಪ್ರಕಾರ ದೇಶದಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಗಣನೀಯವಾಗಿ ಹೆಚ್ಚುತ್ತಿದೆ. 2022ರಲ್ಲಿ ಸುಮಾರು 6000ದಷ್ಟಿದ್ದ ಸಂಖ್ಯೆ 2023ರಲ್ಲಿ ದುಪ್ಪಟ್ಟಾಗಿದೆ.
ಇದು ಕೇವಲ ವಿದ್ಯಾರ್ಥಿಗಳ ಆತ್ಮಹತ್ಯೆ ಅಂಕಿಅಂಶ. ಕಳೆದ ದಶಕದಲ್ಲಿ, 0-24 ವಯೋಮಾನದ ಜನಸಂಖ್ಯೆ 582 ದಶಲಕ್ಷದಿಂದ 581 ದಶಲಕ್ಷಕ್ಕೆ ಇಳಿದಿದ್ದರೂ, ವಿದ್ಯಾರ್ಥಿಗಳ ಆತ್ಮಹತ್ಯೆಗಳ ಸಂಖ್ಯೆ 6,654 ರಿಂದ 13,044ಕ್ಕೆ ತೀವ್ರವಾಗಿ ಏರಿಕೆಯಾಗಿದೆ. ಎಂದರು.
ದೇಶದ ನಾಲ್ಕು ಮಹಾನಗರಗಳ ಅಂಕಿಅಂಶಗಳನ್ನು ಗಮನಿಸಿದರೆ ದೆಹಲಿ ನಗರವು (2,760) ಅತ್ಯಧಿಕ ಆತ್ಮಹತ್ಯೆಗಳ ಸಂಖ್ಯೆಯನ್ನು ದಾಖಲಿಸಿದೆ. ದೆಹಲಿಯ ನಂತರ ಚೆನ್ನೈ (2,699), ಬೆಂಗಳೂರು (2,292) ಮತ್ತು ಮುಂಬೈ (1,436) ಸ್ಥಾನದಲ್ಲಿವೆ. ಈ ನಾಲ್ಕು ನಗರಗಳು ಒಟ್ಟು ಗೂಡಿ 53 ಮಹಾನಗರಗಳಲ್ಲಿ ವರದಿಯಾದ ಒಟ್ಟು ಆತ್ಮಹತ್ಯೆಗಳ 35.5% ರಷ್ಟು ಪ್ರಮಾಣವನ್ನು ದಾಖಲಾಗಿರುವುದು ದುರಾದೃಷ್ಟ ಎಂದು ವಿಷಾದ ವ್ಯಕ್ತಪಡಿಸಿದರು.
2022ರಲ್ಲಿ, ಆತ್ಮಹತ್ಯೆಗಳ ಪ್ರಮಾಣವು 2021ಕ್ಕಿಂತಲೂ 4.2% ಹೆಚ್ಚಾಗಿದೆ, 100,000 ಜನಸಂಖ್ಯೆಗೆ 12 ರಿಂದ 12.4ಕ್ಕೆ (1,64,033 ರಿಂದ 1,70,924) ಏರಿಕೆಯಾಗಿದೆ. ಇದು 56 ವರ್ಷಗಳಲ್ಲಿ ದಾಖಲಾಗಿರುವ ಅತೀ ಹೆಚ್ಚಿನ ಪ್ರಮಾಣವಾಗಿದೆ.
15 ರಿಂದ 24 ವರ್ಷದ ವಯೋಮಾನದ ಪ್ರತೀ ಏಳರಲ್ಲಿ ಒಬ್ಬರು ದೀರ್ಘಕಾಲದ ಮನೋವೈಕಲ್ಯವನ್ನು ಎದುರಿಸುತ್ತಿದ್ದು, ಇದರಲ್ಲಿ 41%ದಷ್ಟು ಜನ ಮಾತ್ರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತಿದ್ದು ಇನ್ನುಳಿದ ಈ ವರ್ಗ ಆತ್ಮಹತ್ಯೆಗೆ ಹೆಚ್ಚು ಬಲಿಯಾಗುತ್ತಿದೆ.
ಹೀಗಾಗಿ ಆತ್ಮಹತ್ಯೆ ನಿಮ್ಮ ಸಮಸ್ಯೆಗೆ ಪರಿಹಾರವಲ್ಲ. ಅತ್ಯಮೂಲ್ಯವಾದ ನಿಮ್ಮ ಜೀವನವನ್ನ ಉಳಿಸಿಕೊಳ್ಳಿ ಎಂದು ಜಾಗೃತಿ ಮೂಡಿಸಲಾಯಿತು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.