ಅವರು ವಿಲವಿಲ ಅನ್ನುತ್ತಾರೋ? ನಾವು ವಿಲವಿಲ ಅಂತೀವೋ ನೋಡೋಣ; ಚಲುವರಾಯಸ್ವಾಮಿ

ಅವರು ಯಾರು ಯಾರನ್ನು ಉಪಯೋಗಿಸಿಕೊಂಡು ತಿಂದು ತೇಗಿದ್ದಾರಲ್ಲಾ ಅದಕ್ಕೆ ಉತ್ತರ ಹೇಳಲು ಹೇಳಿ, ಅವರು ಎಲ್ಲರ ಸಹಕಾರ ತೆಗೆದುಕೊಂಡು ತಿಂದು ತೇಗಿದ್ದಾರೆ.

ಹಾಸನ :  ನಮ್ಮ ಪಕ್ಷ ಸುಭದ್ರವಾಗಿದೆ. ಯಾರದೂ ಯಾವುದೇ ಕಂಪ್ಲೇಟ್‍ ಇಲ್ಲ ಎಂದು ಕೃಷಿ ಸಚಿವ ಸಿ.ಎಸ್‍.ಚಲುವರಾಯಸ್ವಾಮಿ ಹೇಳಿದ್ದಾರೆ.

ಬುಧವಾರ ಹಾಸನಾಂಬೆ ದರ್ಶನ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹೊಂದಾಣಿಕೆಯಲ್ಲಿದ್ದಾರೆ.  ಹೈಕಮಾಂಡ್ ಸುಭದ್ರವಾಗಿದೆ, ಯಾವುದೇ ತರಹದ ಪ್ರಾಬ್ಲಂ ಇಲ್ಲ ಎಂದರು.

ಸಿದ್ದರಾಮಯ್ಯ ಕದ್ದ ವಾಚನ್ನು ಎರಡು ವರ್ಷ ಹಾಕಂಡು ಓಡಾಡಿದರು ಎಂಬ ಎಚ್‌ಡಿಕೆ ಹೇಳಿಕೆಗೆ ತಿರುಗೇಟು ನೀಡಿದ ಚಲುವರಾಯಸ್ವಾಮಿ,  ಕುಮಾರಸ್ವಾಮಿ ಸಿಎಂ  ಆಗಿ ಅನುಭವ ಇರುವಂತಹವರು. ಮಾತನಾಡುವಾಗ ನೋಡಿ ಮಾತನಾಡಬೇಕು. ಹುಡುಗಾಟದದ ಹುಡುಗರ ರೀತಿ ಮಾತನಾಡಬಾರದು. ನಮ್ಮ ಸಿಎಂಗೆ ಜನರ ಸಮಸ್ಯೆ ಮುಖ್ಯ

ಕುಮಾರಸ್ವಾಮಿಗೆ ಬರೀ ರಾಜಕಾರಣ ಮುಖ್ಯ. ನಾವು ಜನರ ಪರ ನಿಂತುಕೊಳ್ಳುವವರು. ಐದು ಸ್ಕೀಂ ಕೊಟ್ಟಿದ್ದೀವಿ, ಬರಗಾಲ, ಕಾವೇರಿ ಸಮಸ್ಯೆ ಎದುರಿಸುತ್ತಿದ್ದೇವೆ. ಕುಮಾರಸ್ವಾಮಿ ಅವರು ಏನೇನು ಮಾಡಿದ್ರು ಅಂತ ಇತಿಹಾಸ ಗೊತ್ತಿದೆ ಎಂದು ವ್ಯಂಗ್ಯವಾಗಿ ಮಾತನಾಡಿದರು.

ನಮ್ಮಲ್ಲಿ ತಿಂದು, ತೇಗಿ ಬೇರೆ ಪಕ್ಷಕ್ಕೆ ಹೋಗಿದ್ದಾರೆ ಎಂಬ ಎಚ್‌ಡಿಕೆ ಹೇಳಿಕೆಗೂ ಪ್ರತಿಕ್ರಿಯಿಸಿದ ಸಚಿವ ಚಲುವರಾಯಸ್ವಾಮಿ, ಹೌದು ಅವರು ಯಾರು ಯಾರನ್ನು ಉಪಯೋಗಿಸಿಕೊಂಡು ತಿಂದು ತೇಗಿದ್ದಾರಲ್ಲಾ ಅದಕ್ಕೆ ಉತ್ತರ ಹೇಳಲು ಹೇಳಿ, ಅವರು ಎಲ್ಲರ ಸಹಕಾರ ತೆಗೆದುಕೊಂಡು ತಿಂದು ತೇಗಿದ್ದಾರೆ. ಅದೇ ತರಹ ಬೇರೆಯವರು ಅಂತ ಅವರು ತಿಳಿದುಕೊಂಡಿದ್ದಾರೆ. ಎಲ್ಲವರೂ ಅವರ ರೀತಿ ಇರಲ್ಲ ಎಂದು ತಿವಿದರು.

ಜೆಡಿಎಸ್‌ನ ಎಲ್ಲಾ ಶಾಸಕರು ಹಾಸನಾಂಬೆ ದೇವಿ ದರ್ಶನ ಹಾಗೂ ಸಭೆ ನಡೆಸುತ್ತಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕೃಷಿ ಸಚಿವ ಚೆಲುವರಾಯಸ್ವಾಮಿ, ಯಾರಾದರೂ ಪಕ್ಷ ಬಿಟ್ಟು ಹೋಗ್ತಾರೆ ಅಂತ ಅವರಿಗೆ ಭಯ ಇರಬೇಕು. ಹಾಸನಾಂಬೆ ದೇವತೆ ಹತ್ತಿರ ಕರೆದುಕೊಂಡು ಬಂದು ಕಮಿಟ್ ಮಾಡುವ ಪ್ರಯತ್ನ ಮಾಡಿರಬೇಕು. ಅವರ ಪಕ್ಷದ ಕೆಲಸ ಅವರು ಮಾಡ್ತಾರೆ, ತಪ್ಪೇನೂ ಇಲ್ಲ. ನಮಗೆ 136 ಶಾಸಕರು ಇದ್ದಾರೆ.  ಬೇರೆಯವರು ಸರ್ಕಾರ ನಡೆಸಲು ಬೇಕಿಲ್ಲ. ಜೆಡಿಎಸ್-ಬಿಜೆಪಿ ಶಾಸಕರಿಗೆ ಮುಂದೆ ನಮ್ಮ ಭವಿಷ್ಯ ಏನು ಎಂದು ಅಲ್ಲಿ ಅಭದ್ರತೆ ಕಾಡುತ್ತಿದೆ. ಕೆಲವರಿಗೆ ಅವಕಾಶ ಸಿಕ್ಕಿದರೆ ಬರಬೇಕು ಎನ್ನುವ ಆಸೆಯಲ್ಲಿದ್ದಾರೆ. ಬಂದರೆ ನಾವೇನು ಬೇಡ ಅನ್ನಲ್ಲ, ಸಂತೋಷ. ಆದರೆ ಬಲವಂತ ಮಾಡಿ ಕರೆದುಕೊಳ್ಳುವ ಪರಿಸ್ಥಿತಿ ಏನಿಲ್ಲ.  ಅಭದ್ರತೆಯಿಂದಲೇ ಅವರು ಬಿಜೆಪಿ ಜೊತೆ ಹೊಂದಾಣಿಕೆಗೆ ಹೋಗಿದ್ದಾರೆ. ಅದೇ ರೀತಿ ಶಾಸಕರನ್ನು ವಿಶ್ವಾಸ ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಅವರ ಶಕ್ತಿ ಹೆಚ್ಚಿಸಿಕೊಳ್ಳಲು ‌ಹೊಂದಾಣಿಕೆ ಮಾಡಿಕೊಂಡರೆ ತೊಂದರೆ ಏನಿಲ್ಲ. ಮಾಡಿಕೊಳ್ಳಲಿ, ಒಳ್ಳೆಯದಾಗಲಿ ಅವರಿಗೆ ಎಂದರು.

ಬಿಜೆಪಿ ಜೊತೆ ಹೊಂದಾಣಿಕೆ ಮಾತುಕತೆ ಮಾಡಿದ್ದಕ್ಕೆ ಕಾಂಗ್ರೆಸ್‌ನವರು ವಿಲವಿಲ ಅಂತಿದ್ದಾರೆ ಎಂಬ ಎಚ್‌ಡಿಕೆ ಹೇಳಿಕೆಗೆ, ಹೌದು, ವಿಲವಿಲ ಅಂತ ಬಿಜೆಪಿ ಜೊತೆ ಹೋಗಿದ್ದಾರೆ.  ಅವರ ಅಪ್ಪ ಯಾವುದೇ ಕಾರಣಕ್ಕೂ ಬಿಜೆಪಿ ಜೊತೆ ಹೋಗಲ್ಲ ಎಂದಿದ್ದರು. ಅವರ ತಂದೆಯ ಗೌರವ ಕಳೆದು ಇವತ್ತು ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು ವಿಲವಿಲ ಅಂತಲೇ ಹೋಗಿರುವುದು. ನಮಗೆ ಯಾಕೆ ವಿಲವಿಲ ಅಂತಾರೆ. ಅವರು ಸಕ್ರಿಯವಾಗಿ ಪಾರ್ಟಿಯನ್ನು ಗಟ್ಟಿ ಮಾಡಲು ಆಗದೆ ಇರುವುದರಿಂದ ಇವತ್ತು ಬಿಜೆಪಿ ಜೊತೆ ಹೊಂದಾಣಿಕೆಗೆ ಹೋಗಿದ್ದಾರೆ. ಕುಮಾರಸ್ವಾಮಿ ಅವರು ಮಾತನಾಡಬೇಕು, ಮಾತನಾಡುತ್ತಾರೆ, ಮಾತನಾಡಲಿ ಬಿಡಿ. ನಮ್ಮಲ್ಲಿ ಯಾವುದೇ ವಿಭಜನೆ ಆಗಲ್ಲ. ನಮ್ಮಲ್ಲಿ ತಾಂತ್ರಿಕವಾಗಿ ಯಾವುದೇ ಕಿತ್ತಾಟ ಇಲ್ಲ. ಏನಾದರೂ ಸಣ್ಣಪುಟ್ಟ ಸಮಸ್ಯೆ ಇದ್ದರೆ ಚರ್ಚೆ ಮಾಡ್ತಾರೆ. ಕುಮಾರಸ್ವಾಮಿ ಅವರು ಏನ್ ಮಾಡ್ತರೆ ಮಾಡ್ಲಿ.

ಮುಂದಿನ ದಿನಗಳಲ್ಲಿ ಅವರು ವಿಲವಿಲ ಅನ್ನುತ್ತಾರೋ? ನಾವು ವಿಲವಿಲ ಅಂತೀವೋ ಪಾರ್ಲಿಮೆಂಟ್ ಚುನಾವಣೆ ಆದ ಮೇಲೆ ಮಾತನಾಡೋಣ ಎಂದರು.