ಇಂದು ಅಬ್ಬರದ ಮೆರವಣಿಗೆಯೊಂದಿಗೆ ನಾಮಪತ್ರ ಸಲ್ಲಿಸಲಿರುವ ಶ್ರೇಯಸ್ ಪಟೇಲ್; ಡಿ.ಕೆ.ಶಿವಕುಮಾರ್ ಸಾಥ್

ಹಾಸನ: ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಇಂದು ಶ್ರೇಯಸ್‌ಪಟೇಲ್‌ ನಾಮಪತ್ರ ಸಲ್ಲಿಸಲಿದ್ದು, ಡಿಸಿಎಂ ಡಿ.ಕೆ. ಶಿವಕುಮಾರ್ ಉಪಸ್ಥಿತಿಯಲ್ಲಿ ಬೃಹತ್ ಮೆರವಣಿಗೆ, ಬಹಿರಂಗ ಸಭೆ‌ ಮೂಲಕ ಕಾಂಗ್ರೆಸ್ ಶಕ್ತಿ ಪ್ರದರ್ಶನ ನಡೆಯಲಿದೆ.

ಬೆಳಗ್ಗೆ 11 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ, ಶಾಸಕರುಗಳಾದ ಕೆ.ಎಂ.ಶಿವಲಿಂಗೇಗೌಡ, ಕಡೂರು ಶಾಸಕ ಆನಂದ್ ಉಪಸ್ಥಿತಿಯಲ್ಲಿ ಡೇರಿ ಸರ್ಕಲ್ ನಿಂದ ಕಾಂಗ್ರೆಸ್ ಕಚೇರಿವರೆಗೆ ಬೃಹತ್ ಮೆರವಣಿಗೆ ಮೂಲಕ ಡಿಸಿ ಕಚೇರಿಗೆ ಆಗಮಿಸಲಿರುವ ಶ್ರೇಯಸ್ ಪಟೇಲ್ 12.45 ರಿಂದ 1.30ರೊಳಗೆ ನಾಮಪತ್ರ ಸಲ್ಲಿಸುವರು. ಆ ವೇಳೆಗೆ ಡಿಸಿಎಂ ಡಿಕೆಶಿ ಸಾಥ್ ನೀಡಲು ಹೆಲಿಕಾಪ್ಟರ್ ಮೂಲಕ ಆಗಮಿಸುತ್ತಿದ್ದಾರೆ.

ನಂತರ ಆಯೋಜಿಸಿರುವ ಬಹಿರಂಗ ಸಭೆಯಲ್ಲಿ ಕಾಂಗ್ರೆಸ್ ನಾಯಕರಿಂದ ಜೆಡಿಎಸ್ ಮೇಲೆ ತೀವ್ರ ವಾಗ್ದಾಳಿ ನಿರೀಕ್ಷಿಸಲಾಗಿದೆ. ಭಾರಿ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕ್ರರ್ತರು ಭಾಗವಹಿಸಲಿದ್ದು, ಶ್ರೇಯಸ್ ಪರ ಅಲೆಯೆಬ್ಬಿಸಲು ಸಿದ್ಧತೆ ನಡೆದಿದೆ.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮೊಮ್ಮಗ ಹಾಲಿ ಸಂಸದ, ಎನ್.ಡಿ.ಎ. ಮೈತ್ರಿಕೂಟದ ಅಭ್ಯರ್ಥಿ ಪ್ರಜ್ವಲ್ ವಿರುದ್ಧ ಅಖಾಡಕ್ಕಿಳಿಯಲಿರುವ ಶ್ರೇಯಸ್, 1999 ರ ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನೇ ಮಣಿಸಿದ್ದ ಮಾಜಿ ಸಂಸದ ದಿವಂಗತ ಜಿ.ಪುಟ್ಟಸ್ವಾಮಿಗೌಡರ ಮೊಮ್ಮಗ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೊಳೆನರಸೀಪುರ ಕ್ಷೇತ್ರದಲ್ಲಿ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರು ಗೆಲುವಿಗಾಗಿ ಬೆವರಿಳಿಸುವಂತೆ ಮಾಡಿದ್ದ ಯುವಕ ಇವರು ಎನ್ನುವುದು ವಿಶೇಷ.