ಹಾಸನ: ಜಿಲ್ಲೆಗೆ ರೈಲುಗಳ ಮೂಲಕ ಮಾದಕ ಪದಾರ್ಥ ಸರಬರಾಜಾಗುತ್ತಿರುವ ಮಾಹಿತಿಯಿದ್ದು ರೈಲ್ವೆ ಪೊಲೀಸರು ಏನು ಮಾಡುತ್ತಿದ್ದಾರೆ ಎಂದು ಸಂಸದ ಶ್ರೇಯಸ್ ಎಂ.ಪಟೇಲ್ ಹರಿಹಾಯ್ದರು.
ನಗರದ ಜಿ.ಪಂ. ಹೊಯ್ಸಳ ಸಭಾಂಗಣದಲ್ಲಿ ತಮ್ಮ ಅಧ್ಯಕ್ಷತೆಯ ಪ್ರಥಮ ದಿಶಾ (ಮೊದಲನೇ/ಎರಡನೇ ತ್ರೈಮಾಸಿಕ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ) ಸಭೆಯ ಆರಂಭದಲ್ಲೇ ಡ್ರಗ್ಸ್ ಹಾವಳಿ ಬಗ್ಗೆ ಪ್ರಸ್ತಾಪಿಸಿದ ಅವರು ರೈಲ್ವೆ ಪೊಲೀಸರ ಕಾರ್ಯವೈಖರಿಗೆ ತೀವ್ರ ಅತೃಪ್ತಿ ವ್ಯಕ್ತಪಡಿಸಿದರು.
ಹಾಸನ ಜಿಲ್ಲೆಗೆ ರೈಲುಗಳ ಮೂಲಕ ಡ್ರಗ್ಸ್ ಪೂರೈಕೆಯಾಗುತ್ತಿದೆ. ಹಳ್ಳಿಹಳ್ಳಿಗಳಲ್ಲಿ ಯುವಕರಿಗೆ ಡ್ರಗ್ಸ್ ಸಿಗುತ್ತಿದೆ. ಡ್ರಗ್ಸ್ ಸೇವಿಸಿ ಯುವಕರು ಹಾಳಾಗುತ್ತಿದ್ದಾರೆ. ರೈಲ್ವೆ ಪೊಲೀಸರು ಏನು ಮಾಡುತ್ತಿದ್ದಾರೆ ಎಂದು ರೈಲ್ವೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ರೈಲ್ವೆ ಪೊಲೀಸರು, ಜಿಲ್ಲಾ ಪೊಲೀಸರ ಜತೆಗೂಡಿ ಕೆಲಸ ಮಾಡಬೇಕು. ಡ್ರಗ್ಸ್ ಹಾವಳಿಗೆ ಸಂಪೂರ್ಣ ಕಡಿವಾಣ ಹಾಕಬೇಕು. ಡ್ರಗ್ಸ್ ಪೆಡ್ಲರ್‌ಗಳನ್ನು ಮೊದಲು ಬಂಧಿಸಿ, ಯಾರ ಒತ್ತಡಕ್ಕೂ ಮಣಿಯಬೇಡಿ ಎಂದು ತಾಕೀತು ಮಾಡಿದರು.
ಡ್ರಗ್ಸ್ ಪೂರೈಸುತ್ತಿರುವ ಪೆಡ್ಲರ್‌ಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ. ಡ್ರಗ್ಸ್ ಜತೆಗೆ ಮಟ್ಕಾ ದಂಧೆ ನಡೆಯುತ್ತಿದೆ. ಹಾಸನದಲ್ಲಿ ಹೆಚ್ಚು ಡ್ರಗ್ಸ್ ಹಾಗೂ ಮಟ್ಕಾ ದಂಧೆ ನಡೆಯುತ್ತಿದೆ. ಇದೆಲ್ಲದಕ್ಕೂ ಕಡಿವಾಣ ಹಾಕಲು ಪೊಲೀಸರಿಗೆ ಸೂಚನೆ ನೀಡಿ ಎಂದು ಎಸ್ಪಿ ಮಹಮದ್ ಸುಜೀತಾ ಅವರಿಗೆ ಸೂಚನೆ ನೀಡಿದರು.
ವ್ಯಸನಿಗಳು ಡ್ರಗ್ಸ್ ಸೇವಿಸಿ ವಿದ್ಯಾರ್ಥಿನಿಯರಿಗೆ ತೊಂದರೆ ಕೊಡುತ್ತಿದ್ದಾರೆ. ಕಾಲೇಜುಗಳು ಬಿಡುವ ವೇಳೆ ಆ ಪ್ರದೇಶಗಳಲ್ಲಿ ಪೊಲೀಸ್ ಗಸ್ತು ಹಾಕಿ, ಬೆಳಿಗ್ಗೆ ಹಾಗೂ ಸಂಜೆ ಬಸ್ಟಾಂಡ್‌ಗಳಲ್ಲಿ ಪೊಲೀಸ್ ಬೀಟ್ ಹೆಚ್ಚಿಸಿ ಎಂದು ನಿರ್ದೇಶ ನೀಡಿದರು.