ಹಾಸನ: ಈದ್ ಮಿಲಾದ್ ಮೆರವಣಿಗೆಯಲ್ಲಿ ಭಾಗಿಯಾಗಿದ್ದವರು ಆರ್.ಎಸ್.ಎಸ್. ವಿರುದ್ಧ ಅವಹೇಳನಕಾರಿ ಘೋಷಣೆ ಕೂಗಿದ್ದಾರೆ ಹಾಗೂ ಗಣಪತಿ ಪೆಂಡಾಲ್ ಒಳಗೆ ಪಟಾಕಿ ಎಸೆದಿದ್ದಾರೆ ಎಂದು ಆರೋಪಿಸಿದ ಹಿಂದುಪರ ಸಂಘಟನೆಗಳ ಮುಖಂಡರು ಎರಡೂ ಪ್ರಕರಣಗಳಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸೋಮವಾರ ನಗರದಲ್ಲಿ ಈದ್ ಮಿಲಾದ್ ಅಂಗವಾಗಿ ಆಯೋಜಿಸಿದ್ದ ಮೆರವಣಿಗೆಯಲ್ಲಿ ಕೆಲವರು ಆರ್.ಎಸ್.ಎಸ್. ವಿರುದ್ಧ ಅವಹೇಳನಕಾರಿ ಘೋಷಣೆ ಕೂಗಿದ್ದಾರೆ. ಸಿಟಿ ಬಸ್ ನಿಲ್ದಾಣ ರಸ್ತೆಯ ಗಣಪತಿ ಪೆಂಡಾಲ್ ಎದುರು ಪಟಾಕಿ ಸಿಡಿಸಿದ್ದಲ್ಲದೆ ಪೆಂಡಾಲ್ ಒಳಗೆ ಪಟಾಕಿ ಎಸೆದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಪೊಲೀಸರು ತಕ್ಷಣವೇ ಪ್ರಕರಣಗಳಲ್ಲಿ ಭಾಗಿಯಾದವರನ್ನು ಪತ್ತೆಹಚ್ಚಿ ಕಾನೂನು ಕ್ರಮ ಜರುಗಿಸಬೇಕು. ಇಲ್ಲವಾದರೆ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿ ನಗರ ಠಾಣೆ ಇನ್ಸ್ ಪೆಕ್ಟರ್ ಮೋಹನ್ ಕೃಷ್ಣ ಅವರಿಗೆ ದೂರು ಸಲ್ಲಿಸಿದರು.
ಬಿಜೆಪಿ ಮುಖಂಡರಾದ ಎಸ್.ಕೆ.ವೇಣುಗೋಪಾಲ್, ಪುನೀತ್ ಮುಂತಾದವರಿದ್ದರು.