ಮೀರ್ ಸಾದಿಕ್ ಗಳಿಂದ ಆರು ಕಾಂಗ್ರೆಸ್ ಅಭ್ಯರ್ಥಿಗಳು ಸೋತಿದ್ದೇವೆ, ಈಗ ಅವರನ್ನೇ ವೇದಿಕೆಯಲ್ಲಿ ಕೂರಿಸಿಕೊಂಡು ಭಾಷಣ ಮಾಡಿಸುತ್ತೇವೆ; ಅಸಮಾಧಾನ ಹೊರಹಾಕಿದ ಬಿ.ಶಿವರಾಮು

ಹೊರಗಿನವರು ಉಸ್ತುವಾರಿಯಾದರೆ ಯಾರ ಮೇಲೆ ಬೇಕೋ ಅವರ ಮೇಲೆ ಕೆಟ್ಟ, ಒಳ್ಳೆಯ ಅಭಿಪ್ರಾಯ ಸೃಷ್ಟಿಮಾಡ್ತಾರೆ

ಹಾಸನ: ಒಬ್ಬ ಅದೇ ಜಿಲ್ಲೆಯ ವ್ಯಕ್ತಿ ಉಸ್ತುವಾರಿ ಮಂತ್ರಿಯಾಗಿ ಬಂದರೆ ನಿಜವಾದ ಮಾಹಿತಿ ದೊರಕಿ ಕೆಲಸ ಮಾಡಲು ಸಾಧ್ಯವಾಗುತ್ತದೆ ಹೊರತು ಹೊರಗಡೆಯಿಂದ ಬಂದವರು ಇಲ್ಲಿನ ಸ್ಥಿತಿ ಅರ್ಥ ಮಾಡಿಕೊಂಡು ಕೆಲಸ ಮಾಡುವುದರೊಳಗೆ ಅವರ ಕಿವಿ ಊದಿ, ಇಲ್ಲದ್ದೆಲ್ಲವನ್ನೂ ಹೇಳುತ್ತಾರೆ ಎಂದು ಮಾಜಿ ಸಚಿವ ಬಿ.ಶಿವರಾಮು ಪರೋಕ್ಷವಾಗಿ ಅಸಮಾಧಾನ ಹೊರ ಹಾಕಿದರು.

ಗೃಹಮಂಡಳಿ ಅಧ್ಯಕ್ಷರಾಗಿ ನೇಮಕವಾಗಿರುವ ಕೆ.ಎಂ.ಶಿವಲಿಂಗೇಗೌಡರಿಗೆ ಆಯೋಜಿಸಲಾಗಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹೊರಗಿನವರು ಉಸ್ತುವಾರಿಯಾದರೆ ಯಾರ ಮೇಲೆ ಬೇಕೋ ಅವರ ಮೇಲೆ ಕೆಟ್ಟ, ಒಳ್ಳೆಯ ಅಭಿಪ್ರಾಯ ಸೃಷ್ಟಿಮಾಡಿ ಕೊನೆಯ ಹೊತ್ತಿಗೆ ಅಲ್ಲೋಲ ಕಲ್ಲೋಲ ಆಗುತ್ತದೆ.

ಏನೂ ಇಲ್ಲದೇ ಅಪಾದನೆಗಳು ಬರುವ ಸನ್ನಿವೇಶ ಸೃಷ್ಟಿ ಆಗುತ್ತವೆ. ಆದರೆ ತಾಳ್ಮೆ ಇರಬೇಕು, ಅದು ಅನಿವಾರ್ಯ. ಇವತ್ತು ರಾಜಣ್ಣ ಅವರು ಸೂಕ್ಷ್ಮವಾಗಿ ಹೇಳಿದರು.
ಏನೆಲ್ಲಾ ಘಟನೆಗಳು ನಡೆದವು, ನಾವೆಲ್ಲ ಒಂದಾಗಿದ್ದೇವೆ ಅಂತ ಹೇಳಿದ್ರು. ಆ ಘಟನೆಗಳು ಉದ್ದೇಶಪೂರ್ವಕವಾಗಿ ಆಗಿರುವುದಲ್ಲ, ಯಾರೋ ಮಧ್ಯದಲ್ಲಿ ಹೇಳಿದ ಮಾತಿನಿಂದ ಇಷ್ಟೆಲ್ಲಾ ಸೃಷ್ಟಿಯಾಯ್ತು ಎಂದರು.

ನನಗೂ ಕೂಡ ನೋವಾದಾಗ ಮಾತನಾಡುವ ಸನ್ನಿವೇಶ ಬಂತು ಮಾತನಾಡಿದ್ದೇನೆ. ಆದರೆ ಬಗೆಹರಿಸಿಕೊಂಡಿದ್ದೇವೆ, ಒಂದು ತಿಳಿ ವಾತಾವರಣ ಸೃಷ್ಟಿ ಮಾಡಿಕೊಟ್ಟಿದ್ದಾರೆ.
ಆದರೆ ಮೀರ್ ಸಾದಿಕ್‌ಗಳನ್ನು ಏನು ಮಾಡಬೇಕು? ಈ ಜಿಲ್ಲೆಯಲ್ಲಿ ಆರು ಕಾಂಗ್ರೆಸ್ ಅಭ್ಯರ್ಥಿಗಳು ಸೋತಿದ್ದಾರೆ. ಅವರ ಶ್ರಮ ಎಷ್ಟಿದೆ? ಅವರ ಸೋಲಿಗೆ ಕಾರಣ ಏನು? ಎಂದು ಪ್ರಶ್ನಿಸಿದರು.

ಸೋಲಿಗೆ ಕಾರಣ ಆದವರನ್ನೇ ವೇದಿಕೆ ಮೇಲೆ ಕೂರಿಸಿಕೊಂಡು ಮಾತನಾಡುತ್ತಿರುತ್ತೀವಿ. ಅವರೇ ಭಾಷಣ ಮಾಡ್ತಾರೆ, ನಾನು ಸೋತು ಗೆದ್ದು ಬಂದಿದ್ದೇನೆ. ಅವರನ್ನು ಸೇರಿಸಿಕೋಬೇಕು, ಇವರನ್ನು ಸೇರಿಸಿಕೋಬೇಕು? ಯಾರನ್ನು ಸೇರಿಸಿಕೊಳ್ಳಬೇಕು? ಯಾರನ್ನು ಬಿಡಬೇಕು? ಮೀರ್‌ಸಾದಿಕ್‌ರನ್ನು ಸೇರಿಸಿಬೇಕೋ? ಪ್ರಾಮಾಣಿಕರನ್ನು ಸೇರಿಸಿಕೊಳ್ಳಬೇಕಾ? ಪ್ರಾಮಾಣಿಕರನ್ನು ಗುರುತಿಸಿ ಕೆಲಸ ಮಾಡಿಕೊಡಬೇಕಾ? ಅದಕ್ಕೂ ಸಚಿವರೇ ಉತ್ತರ ಹೇಳಿಬಿಟ್ಟರೆ ನಾನು ಅವರ ಮಾರ್ಗದರ್ಶನದಲ್ಲಿ ಹೋಗಲು ಬದ್ದನಾಗಿದ್ದೇನೆ ಎಂದರು.

ನಿಜವಾದ ಸೋಲು ಆಗಿರುವುದು ಮೀರ್‌ಸಾದಿಕ್‌ರಿಂದ, ಅವರಿಗೂ ಅನುಭವ ಇದೆ. ನೀವು ಅವರಿಗೆ ಕಟ್ಟೆಚ್ಚರ ಕೊಡಲೇಬೇಕು. ಇಂತಹ ಪರಿಸ್ಥಿತಿ ಆರು ಜನ ಅನುಭವಿಸಿದ್ದೇವೆ. ಕೆಲವರಿಗೆ ಇಕ್ಕಟ್ಟಿದೆ, ನನಗೇನೂ ಇಕ್ಕಟ್ಟಿಲ್ಲ. ಪ್ರಾಮಾಣಿಕವಾಗಿ ಕಾಂಗ್ರೆಸ್‌‌ನಲ್ಲಿ ಇದ್ದುಕೊಂಡು ಜನಸೇವೆ ಮಾಡಿಕೊಂಡು ಬಂದಿದ್ದೇನೆ ಎಂದರು.

ಭಾಷಣದ ವೇಳೆ ಭಾವುಕರಾದ ಶಿವರಾಮು, ನಾನು ಪಕ್ಷ ಬದಲಾವಣೆ ಮಾಡಿಲ್ಲ, ಅಧಿಕಾರ ಇರಲಿ, ಇಲ್ಲದಿರಲಿ ಕೆಲಸ ಮಾಡುವುದನ್ನು ಬಿಟ್ಟಿಲ್ಲ ಎಂದರು.