ಮಂಜು ಬನವಾಸೆ
ಇಂದು ಮೃತರಾದ ಹಿರಿಯ ರಾಜಕೀಯ ಮುತ್ಸದ್ಧಿ ಎಸ್.ಎಂ.ಕೃಷ್ಣ, ಬೆಂಗಳೂರನ್ನು ಸಿಂಗಾಪುರ ಮಾಡುವ ವಾಗ್ದಾನದೊಂದಿಗೆ 1999 ರಲ್ಲಿ ಮುಖ್ಯಮಂತ್ರಿಯಾಗಿ ಕಾರ್ಯಾರಂಭ ಮಾಡಿ ರಾಜಧಾನಿಯನ್ನು ಐಟಿ-ಬಿಟಿ ಕೇಂದ್ರವಾಗಿಸುವಲ್ಲಿ ಯಶಸ್ವಿಯೂ ಆದರು. ಆದರೆ, ಅವರು ಆಡಳಿತ ನಡೆಸಿದ ಸುಮಾರು ನಾಲ್ಕೂವರೆ ವರ್ಷಗಳು ರಾಜ್ಯದ ಯಾವುದೇ ಮುಖ್ಯಮಂತ್ರಿಯೊಬ್ಬರು ಎದುರಿಸದಷ್ಟು ಸವಾಲು, ಸಂಕಷ್ಟಗಳನ್ನು ಎದುರಿಸಬೇಕಾಯಿತು. ಅವರ ಪಾಲಿಗೆ ಮುಖ್ಯಮಂತ್ರಿ ಗಾದಿ ಮುಳ್ಳಿನ ಕುರ್ಚಿ ಎನ್ನುವಷ್ಟು ತೊಂದರೆಗಳು ಎದುರಾದರೂ ಎಲ್ಲವನ್ನೂ ಸಮಚಿತ್ತದಿಂದಲೇ ನಿಭಾಯಿಸಿದರು.
ವೀರಪ್ಪನ್ ಕಾಟ:
ಕಾಡುಗಳ್ಳ, ನರಹಂತಕನಾಗಿ ಕುಖ್ಯಾತನಾಗಿದ್ದ ವೀರಪ್ಪನ್ ೨೦೦೦ನೇ ಇಸವಿ ಜುಲೈ 30ರಂದು ವರನಟ ಡಾ.ರಾಜ್‌ಕುಮಾರ್ ಅವರನ್ನು ಅಪಹರಿಸಿದ. ಆ ಸಮಯದಲ್ಲಿ ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆಗೆ ಧಕ್ಕೆ ಬರುವಷ್ಟು ಜನಾಕ್ರೋಶ ವ್ಯಕ್ತವಾಗಿತ್ತು. ಡಾ.ರಾಜ್, ವೀರಪ್ಪನ್ ವಶದಲ್ಲಿದ್ದ 108 ದಿನಗಳೂ ಎಸ್.ಎಂ.ಕೃಷ್ಣ ಅವರಿಗೆ ನೆಮ್ಮದಿಯಿಂದ ನಿದ್ದೆ ಮಾಡಲು ಸಾಧ್ಯವಿಲ್ಲದಷ್ಟು ಒತ್ತಡದಲ್ಲಿ ರಾಜ್ಯದ ಆಡಳಿತವನ್ನು ನಿಭಾಯಿಸುವ ಜತೆಗೆ ದಿನಕ್ಕೊಂದು ನಿಲುವು ತಳೆಯುತ್ತಿದ್ದ ವೀರಪ್ಪನ್ ಜತೆಗೂ ರಾಜಿ-ಸಂಧಾನ ಮುಂದುವರಿಸಬೇಕಾಗಿತ್ತು. ಆದರೂ ಅವರು ಸಾರ್ವಜನಿಕವಾಗಿ ಒಂದು ದಿನವೂ ಸಂಯಮ ಕಳೆದುಕೊಂಡು ಮಾತನಾಡಲಿಲ್ಲ. ಒತ್ತಡ ಹೊರಗೆ ತೋರಿಸಿಕೊಳ್ಳಲಿಲ್ಲ. ರಾಜಕುಮಾರ್ ಬಿಡುಗಡೆ ನಂತರ ಧನ್ಯಮಿಲನ ಕಾರ್ಯಕ್ರಮ ಏರ್ಪಡಿಸಿ ಅದರಲ್ಲಿಯೂ ಸರ್ಕಾರದ ವರ್ಚಸ್ಸು ಹೆಚ್ಚಿಸಿಕೊಳ್ಳುವ ಜಾಣೆ ನಡೆ ಅನುಸರಿಸಿದ್ದರು.
ನಾಗಪ್ಪ ಸಾವು:
ಇದಾದ ನಂತರ ಅಪಹರಣದಲ್ಲಿನ ಲಾಭ ಮನಗಂಡ ವೀರಪ್ಪನ್, ಮಾಜಿ ಶಾಸಕ ನಾಗಪ್ಪ ಅವರನ್ನು ಅಪಹರಿಸಿದ. ಇದು ಮತ್ತೊಮ್ಮೆ ಎಸ್ಸೆಂಕೆ ಅವರಿಗೆ ತಲೆನೋವು ತಂದಿಟ್ಟಿತು. ಅಲ್ಲದೇ ನಾಗಪ್ಪ ಅವರು ವೀರಪ್ಪನ್ ವಶದಲ್ಲಿದ್ದಾಗಲೇ ಗುಂಡೇಟಿಗೆ ಬಲಿಯಾದರು. ಆ ಸಮಯದಲ್ಲಿನ ಒತ್ತಡವನ್ನು ಮುಖ್ಯಮಂತ್ರಿಯಾಗಿ ನಿಭಾಯಿಸುವ ಸಂಕಷ್ಟ ಕೃಷ್ಣ ಅವರ ಪಾಲಿಗೆ ಬಂದಿತ್ತು.
ನಾಲ್ಕು ವರ್ಷಗಳ ಬರ:
ಕೃಷ್ಣ ಆಡಳಿತಾವಧಿಯ ನಾಲ್ಕು ವರ್ಷಗಳು ರಾಜ್ಯವನ್ನು ಕಾಡಿದ ನಿರಂತರ ಬರವನ್ನು ನಿಭಾಯಿಸುವುದು ಮುಖ್ಯಮಂತ್ರಿ ಪಾಲಿನ ಬಹುದೊಡ್ಡ ಸವಾಲಾಗಿತ್ತು. ಒಂದೆಡೆ ಆಹಾರ ಧಾನ್ಯಗಳ ಕೊರತೆ ಎದುರಾಗದಂತೆ ನೋಡಿಕೊಳ್ಳುವ ಜತೆಗೆ ಅನ್ನದಾತರು ಅನ್ನ ಹುಡುಕಿಕೊಂಡು ವಲಸೆ ಹೋಗುವುದನ್ನು ತಡೆಯುವಂತಹ ದೊಡ್ಡ ಸಮಸ್ಯೆ ಅನುಭವಿಸಬೇಕಾಯಿತು. ಬರ ಸಂಕಷ್ಟದ ನಡುವೆಯೂ ಆಡಳಿತ ವಿರೋಧಿ ಅಲೆ ಏಳದಂತೆ ಎಲ್ಲವನ್ನೂ ನಿಭಾಯಿಸಿದರು.
ಕಾವೇರಿ ವಿವಾದ:
ಕಾವೇರಿ ಕೊಳ್ಳದಲ್ಲಿನ ಬರದಿಂದಾಗಿ ರಾಜ್ಯದ ಅಣೆಕಟ್ಟೆಗಳೇ ಬರಿದಾಗಿದ್ದಾಗ ತಮಿಳುನಾಡು ಕಾವೇರಿ ಕ್ಯಾತೆ ತೆಗೆದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತು. ಇದರಿಂದ ಮತ್ತೊಮ್ಮೆ ಕಾವೇರಿ ವಿವಾದ ಭುಗಿಲೆದ್ದಿತು. ಸುಪ್ರೀಂ ಕೋರ್ಟ್ ನೀರು ಬಿಡುಲು ಸೂಚಿಸಿದಾಗ ಅಡಕತ್ತರಿಯಲ್ಲಿ ಸಿಲುಕಿದ ಸನ್ನಿವೇಶವನ್ನು ನಿಭಾಯಿಸಲು ಕೃಷ್ಣ ಪರದಾಡಿದರು. ಜನರನ್ನು ಸಮಾಧಾನಪಡಿಸಲು ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಮಾಡಿ ರಾಜ್ಯದ ರೈತರ ಪರವಾದ ಬದ್ಧತೆ ಎನ್ನುವ ನಿಲುವು ಪ್ರದರ್ಶಿಸಿದರು. ಆದರೆ ಸುಪ್ರೀಂ ಕೋರ್ಟ್ ಚಾಟಿ ಬೀಸಿದಾಗ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಸಲಹೆ ಪಡೆದು ತಮಿಳುನಾಡಿಗೆ ನೀರು ಹರಿಸಿದರು.
ಇಂತಹ ಎಡಬಿಡದ ಸಮಸ್ಯೆಗಳ ನಡುವೆಯೂ ಅವರು ರಾಜ್ಯದ ಅಭಿವೃದ್ಧಿಗೆ ಒತ್ತು ನೀಡಿದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರಿನ ಖ್ಯಾತಿ ಬೆಳೆಯುವಂತೆ ಮಾಡಿದರು.
ಐದು ವರ್ಷಗಳ ಅಧಿಕಾರಾವಧಿ ಪೂರ್ಣಗೊಳಿಸುವ ಎಲ್ಲ ಅವಕಾಶವಿದ್ದರೂ ಸಂಸತ್ ಚುನಾವಣೆಯೊಂದಿಗೇ ವಿಧಾನಸಭೆ ಚುನಾವಣೆ ಎದುರಿಸುವ ಕಾಂಗ್ರೆಸ್ ಹೈಕಮಾಂಡ್ ಆದೇಶಕ್ಕೆ ಕಟ್ಟುಬಿದ್ದು ಆರು ತಿಂಗಳು ಮುಂಚಿತವಾಗಿಯೇ ಜನಾದೇಶ ಪಡೆಯಲು ಮುಂದಾದರು. ಸತತ ಬರ ಹಾಗೂ ಕೇಂದ್ರಕ್ಕೊಂದು, ರಾಜ್ಯಕ್ಕೊಂದು ಸರ್ಕಾರ ಎನ್ನುವ ನಿಲುವು ಪ್ರದರ್ಶಿಸುವ ರಾಜ್ಯದ ಮತದಾರ ನಿರ್ಧಾರದ ಫಲವಾಗಿ ಅವರು ಮತ್ತೊಮ್ಮೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ವಿಫಲರಾದರು.