ಹಾಸನ: ಸಮಾಜ ಸೇವಕ, ಉದ್ಯಮಿ, ಹಿರಿಯ ಹೋರಾಟಗಾರ, ವಾಲ್ಮೀಕಿ ಸಮುದಾಯದ ಮುಖಂಡ ಜಿ.ಓ. ಮಹಾಂತಪ್ಪ (75) ಇಂದು ಹೃದಯಾಘಾತದಿಂದ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.
ಬೆಂಗಳೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಅವರು ಮೆಟ್ಟಿಲು ಹತ್ತುವಾಗ ಅಸ್ವಸ್ಥಗೊಂಡ ಕುಸಿದರು. ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದಾಗ ಅವರು ಹೃದಯಾಘಾತಕ್ಕೊಳಗಾಗಿ ಕೊನೆಯುಸಿರೆಳೆದಿರುವುದಾಗಿ ವೈದ್ಯರು ತಿಳಿಸಿದರು.
ಮೂಲತಃ ಚಿತ್ರದುರ್ಗ ಜಿಲ್ಲೆಯವರಾದ ಮಹಾಂತಪ್ಪ ಕೇಂದ್ರ ಸರ್ಕಾರಿ ಸ್ವಾಮ್ಯದ ಅಶೋಕಾ ಹೋಟೆಲ್ ಉದ್ಯಮಿಯಾಗಿ ಹಾಸನಕ್ಕೆ ಬಂದವರು ಸ್ವಯಂ ನಿವೃತ್ತಿ ನಂತರ ಸ್ವಂತ ಉದ್ಯಮದ ಹಾದಿ ಹಿಡಿದರು.
ಪ್ಲೈವುಡ್ ಕಾರ್ಖಾನೆ, ಕಟ್ಟಡ ನಿರ್ಮಾಣ, ಇಂಟೀರಿಯರ್ ಗುತ್ತಿಗೆ ಸೇರಿದಂತೆ ಹಲವಾರು ಉದ್ಯಮಗಳಲ್ಲಿ ತೊಡಗಿಕೊಂಡಿದ್ದ ಅವರು ಯಶಸ್ವಿ ಉದ್ಯಮಿಯಷ್ಟೇ ಅಲ್ಲದೇ ಸಮಾಜ ಸೇವಕರಾಗಿಯೂ ತಮ್ಮದೇ ಛಾಪು ಮೂಡಿಸಿದ್ದರು. ಹಲವಾರು ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ವಾಲ್ಮೀಕಿ ಸಮಾಜದ ಸಂಘಟನೆಯಲ್ಲಿ ಅವರು ಸಾಕಷ್ಟು ಶ್ರಮಿಸಿದ್ದರು.
ಮೃತರಿಗೆ ಪತ್ನಿ, ಪುತ್ರ ಇದ್ದಾರೆ. ಅವರ ಮೃತದೇಹವನ್ನು ಹಾಸನಕ್ಕೆ ತರಲಾಗುತ್ತಿದ್ದು ಎಸ್.ಎಂ.ಕೃಷ್ಣ ಬಡಾವಣೆಯ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಇರಿಸಲಾಗುವುದು.