ಸವಿತಾ ಮಹರ್ಷಿ ಜಯಂತಿಯಲ್ಲಿ ಮಾರಾಮಾರಿ; ಹೊಡೆದಾಡಿಕೊಂಡ ಸದಸ್ಯರು, ಕಾರ್ಯಕ್ರಮ ರದ್ದು

ಗಲಾಟೆ ಶುರುವಾದ ತಕ್ಷಣ ಸಭೆಯಿಂದ ಹೊರ ನಡೆದ ಅತಿಥಿ ಬಿ.ಶಿವರಾಮು

ಹಾಸನ : ಬೇಲೂರಿನಲ್ಲಿ ಇಂದು ಹಮ್ಮಿಕೊಂಡಿದ್ದ ಸವಿತಾ ಮಹರ್ಷಿ ಜಯಂತಿಯಲ್ಲಿ ಮಾರಾಮಾರಿ ನಡೆದು ಕಾರ್ಯಕ್ರಮ ಅರ್ಧಕ್ಕೆ ಸ್ಥಗಿತಗೊಂಡಿದೆ.

ಪಟ್ಟಣದ ಸವಿತಾ ಸಮಾಜ ಕಚೇರಿಯಲ್ಲಿ ಸಮಾಜದ ಮಾಜಿ ಅಧ್ಯಕ್ಷ ನರಸಿಂಹಸ್ವಾಮಿ ಅವರ ನೇತೃತ್ವದಲ್ಲಿ ಸಮಾರಂಭ ಆಯೋಜಿಸಲಾಗಿತ್ತು.

ಮುಖ್ಯ ಅತಿಥಿಯಾಗಿ ಮಾಜಿ ಸಚಿವ ಬಿ.ಶಿವರಾಂ
ಸಹ ಪಾಲ್ಗೊಂಡಿದ್ದರು. ಆದರೆ ಅಲ್ಲಿಗೆ
ಹಾಲಿ ತಾಲ್ಲೂಕು ಅಧ್ಯಕ್ಷ ಪ್ರಕಾಶ್ ಹಾಗೂ ಬೆಂಬಲಿಗರು
ಬಂದು ಪ್ರತ್ಯೇಕ ಕಾರ್ಯಕ್ರಮ ಮಾಡುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಮಾತಿಗೆ ಮಾತು ಬೆಳೆದು
ಕಚೇರಿಯಲ್ಲಿ ಪರಸ್ಪರ ಹೊಡೆದಾಡಿಕೊಂಡ ಘಟನೆಯು ನಡೆಯಿತು.

ಪ್ರಕಾಶ್ ಬೆಂಬಲಿಗರು ಕಚೇರಿಗೆ ಹಾಕಿದ್ದ ಬೋರ್ಡ್ ಕಿತ್ತು ಎಸೆದರು. ಹೊಡೆದಾಟದಿಂದ ಕಾರ್ಯಕ್ರಮ ಅರ್ಧಕ್ಕೆ ನಿಂತಿತು. ಎರಡೂ ಗುಂಪುಗಳಿಂದ ಹೊಡೆದಾಟ ಶುರುವಾಗುತ್ತಿದ್ದಂತೆ ಮಾಜಿ ಸಚಿವ ಬಿ.ಶಿವರಾಂ ಹೊರ ನಡೆದರು.