ಚಳಿಯಲ್ಲಿ ದುಡಿಯುವ ದಿನಗೂಲಿ ಕಾರ್ಮಿಕರ ನೆರವಿಗೆ ಧಾವಿಸಿದ ಸಪ್ನಾ ಸಿಂಗ್‌ ತಂಡದ ಮಾದರಿ ಸೇವೆಗೆ ಶ್ಲಾಘನೆ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಚಳಿಯ ತೀವ್ರತೆ ಹೆಚ್ಚಿದ ಹಿನ್ನೆಲೆಯಲ್ಲಿ, ರಸ್ತೆ ಬದಿ ಮತ್ತು ಗುಡಿಸಲುಗಳಲ್ಲಿ ಆಶ್ರಯ ಪಡೆದಿರುವ ಸಾವಿರಾರು ದಿನಗೂಲಿಗರು ನರಳಾಡುತ್ತಿದ್ದಾರೆ. ಈ ಸಂಕಷ್ಟವನ್ನು ಮನಗಂಡು, ಸಾಮಾಜಿಕ ಸೇವೆಯ ಉದಾತ್ತ ದೃಷ್ಟಿಕೋನವನ್ನಿಟ್ಟುಕೊಂಡು, ಕಲಿಕಾ ಸಂಸ್ಥೆಯ ಮುಖ್ಯಸ್ಥೆ ಸಪ್ನಾ ಸಿಂಗ್‌ ತಮ್ಮ ತಂಡದೊಂದಿಗೆ ಬೆಡ್‌ಶೀಟ್‌, ಹೊದಿಕೆಗಳ ವಿತರಣೆ ಮೂಲಕ ತೀವ್ರ ಶೀತವನ್ನು ಎದುರಿಸಲು ದಿನಗೂಲಿ ಕಾರ್ಮಿಕರಿಗೆ ಸಹಾಯಹಸ್ತ ಚಾಚಿದ್ದಾರೆ.

ಸಮಾಜ ಸೇವೆಯಲ್ಲಿ ಮಾದರಿಯಾದ ಸಪ್ನಾ ಸಿಂಗ್:
ಕಳೆದ 15 ದಿನಗಳಿಂದ, ಸಪ್ನಾ ಸಿಂಗ್ ಮತ್ತು ಅವರ ತಂಡ ಬೆಂಗಳೂರಿನ ವಿವಿಧ ಭಾಗಗಳಲ್ಲಿ ಪ್ರತಿ ದಿನ 150-200 ಬೆಡ್‌ಶೀಟ್‌, ರಗ್ಗುಳನ್ನು ವಿತರಿಸುತ್ತಿದ್ದಾರೆ. ವಿಶೇಷವಾಗಿ, ದುರ್ಬಲ ವೃದ್ಧರು, ಮಹಿಳೆಯರು, ಬಾಣಂತಿಯರು ಮತ್ತು ಮಕ್ಕಳಿಗೆ ಈ ಸಕಾಲದ ಸಹಾಯ ಲಭ್ಯವಾಗುತ್ತಿದೆ.

“ನಾವು ತಲುಪಲಾರದ ಸ್ಥಳಗಳಲ್ಲೂ ಸಹ ಜನರಿಗೆ ಬೆಡ್‌ಶೀಟ್‌ಗಳ ಅಗತ್ಯವಿದ್ದರೆ, ನಮ್ಮ ತಂಡ ತಮ್ಮ ಸ್ಥಳಕ್ಕೆ ತೆರಳಿ ಅವುಗಳನ್ನು ವಿತರಿಸಲು ಸಿದ್ಧವಾಗಿದೆ” ಎಂದು ಸಪ್ನಾ ಸಿಂಗ್ ತಿಳಿಸಿದ್ದಾರೆ.

ಸಾಮಾಜಿಕ ಸೇವೆಗೆ ಹೊಸ ದಿಕ್ಕು:
ಬೆಂಗಳೂರಿನ ಸಮಶೀತೋಷ್ಣ ವಾತಾವರಣಕ್ಕೆ ಹೊಂದಿಕೊಂಡಿ ಜನರಿಗೆ ಈ ಆಕಸ್ಮಿಕ ಚಳಿ ಸಂಕಷ್ಟವನ್ನು ಉಂಟುಮಾಡಿದ್ದು, ಸಪ್ನಾ ಸಿಂಗ್‌ ಅವರ ಈ ಸಾಮಾಜಿಕ ಕಾರ್ಯವು ಸಾವಿರಾರು ಜನರಿಗೆ ರಕ್ಷಾಕವಚವಾಗಿ ಕಾರ್ಯನಿರ್ವಹಿಸುತ್ತಿದೆ. ಪಬ್, ಪಾರ್ಟಿ ಅಥವಾ ನೈಟ್ ಔಟ್‌ಗಳಲ್ಲಿ ಕಾಲ ಕಳೆಯುವ ಇಂದಿನ ಯುವಜನತೆಗೆ ಸಪ್ನಾ ಅವರ ಕಾರ್ಯ ಮಾನವೀಯತೆಯ ಪಾಠವಾಗಿದ್ದು, ಯುವ ಸಮುದಾಯದ ಮಾದರಿಯಾಗಿದೆ.

ಮಹತ್ವಪೂರ್ಣ ಉದಾಹರಣೆ:
ಇಂತಹ ಸೇವೆಗಳಿಂದ ಮನಸ್ಸಿನಲ್ಲಿ ಬಡವರ ಬಗ್ಗೆ  ಕಾಳಜಿಯನ್ನು ಮೂಡಿಸಿ ಮತ್ತು ಸಹಾಯ ಮಾಡುವ ಉತ್ಸಾಹವನ್ನು ಪ್ರೇರೇಪಿಸುತ್ತಿದೆ.