ಕಾಫಿ ತೋಟದಲ್ಲಿದ್ದ ರಕ್ತಚಂದನ ಕಳ್ಳನನ್ನು ಹಿಡಿದ ಆಂಧ್ರ ಪೊಲೀಸರನ್ನು ರೌಡಿಗಳೆಂದು ಭಾವಿಸಿ ಚೇಸ್ ಮಾಡಿ ಹಿಡಿದ ಸಕಲೇಶಪುರ ಪೊಲೀಸರು!

ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡದೆ ಆರೋಪಿಯನ್ನು ವಶಕ್ಕೆ ಪಡೆದು ಯಡವಟ್ಟು ಮಾಡಿದ ಆಂಧ್ರ ಪೊಲೀಸರು

ಹಾಸನ: ಹೊರರಾಜ್ಯದ ಪೊಲೀಸರನ್ನು ಕಿಡ್ನಾಪ್ ಮಾಡುತ್ತಿರುವ ರೌಡಿಗಳೆಂದು ಭಾವಿಸಿದ ಸಕಲೇಶಪುರ ಗ್ರಾಮಾಂತರ ಠಾಣೆ ಪೊಲೀಸರು ಅವರ ವಾಹನ ಬೆನ್ನಟ್ಟಿ ತಡೆದು ಠಾಣೆಗೆ ಕರೆದೊಯ್ದು ವಿಚಾರಣೆಗೊಳಪಡಿಸಿದ ಘಟನೆ ಬಾಳ್ಳುಪೇಟೆಯಲ್ಲಿ ನಡೆದಿದೆ.

ರಕ್ತಚಂದನ ಮಾರಾಟ ಹಾಗೂ ಪೊಲೀಸ್ ಸಿಬ್ಬಂದಿ ಮೇಲೆ ಬೈಕ್ ಹತ್ತಿಸಿ ಕೊಲೆಗೆ ಯತ್ನಿಸಿದ್ದ ಪ್ರಕರಣಗಳ ಆರೋಪಿ ಸುರೇಶ್ ಎಂಬಾತ ಆಂಧ್ರಪ್ರದೇಶದಿಂದ ತಲೆಮರೆಸಿಕೊಂಡು ಬಂದು ಸಕಲೇಶಪುರ ತಾಲ್ಲೂಕಿನ, ವಲ್ಲಹಳ್ಳಿ ಗ್ರಾಮದ ಕಾಫಿ ತೋಟದಲ್ಲಿ ಕೂಲಿ ಕೆಲಸಕ್ಕೆ ಸೇರಿಕೊಂಡಿದ್ದ.

ಆದರೆ ಆತನ ಸುಳಿವು ಹಿಡಿದ ಆಂಧ್ರಪ್ರದೇಶದ ಪಿ.ಎನ್.ಪಲ್ಲಿ ಪೊಲೀಸ್ ಠಾಣೆ ಪೊಲೀಸರ ತಂಡ ಆರೋಪಿ ಸುರೇಶ್ ನನ್ನು ಪತ್ತೆ ಮಾಡಿ ವಶಕ್ಕೆ ಪಡೆದರು

ಆದರೆ ಮಫ್ತಿಯಲ್ಲಿದ್ದ ಪೊಲೀಸರನ್ನು ರೌಡಿಗಳೆಂದು ಭಾವಿಸಿದ ತೋಟದ ಕಾರ್ಮಿಕರು ವಿರೋಧ ವ್ಯಕ್ತಪಡಿಸಿದರು. ಆದರೆ ಅದನ್ನು ಲೆಕ್ಕಿಸದ ಪೊಲೀಸರು ಆರೋಪಿಯನ್ನು ತಾವು ಬಂದಿದ್ದ ಖಾಸಗಿ ವಾಹನಕ್ಕೆ ಹತ್ತಿಸಿಕೊಂಡು ಹಾಸನದ ಕಡೆಗೆ ಹೊರಟರು.

ಆದರೆ ಕಾರ್ಮಿಕರು ನೀಡಿದ ಮಾಹಿತಿ ಆಧರಿಸಿ ತೋಟದ ಮ್ಯಾನೇಜರ್ ತಮ್ಮ ಕೂಲಿ ಕಾರ್ಮಿಕನನ್ನು ಯಾರೋ ಅಪಹರಿಸಿಕೊಂಡು ಹೋಗಿದ್ದಾರೆ ಎಂದು ಸಕಲೇಶಪುರ ಗ್ರಾಮಾಂತರ ಠಾಣೆ ಪೊಲೀಸರಿಗೆ ದೂರವಾಣಿ ಮೂಲಕ ದೂರು ನೀಡಿದರು.

ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು, ಆಂಧ್ರಪ್ರದೇಶದ ಪೊಲೀಸರು ತೆರಳುತ್ತಿದ್ದ ವಾಹನವನ್ನು ಬೆನ್ನಟ್ಟಿ‌ ಹೋಗಿ ಬಾಳ್ಳುಪೇಟೆ ಬಳಿ ಕಾರು ಅಡ್ಡಗಟ್ಟಿದರು.

ರಸ್ತೆಯಲ್ಲಿಯೇ ನಿಲ್ಲಿಸಿ ವಾಹನದಲ್ಲಿದ್ದವರ ವಿಚಾರಣೆ ನಡೆಸಿದ ಪೊಲೀಸರು ಅವರ ವಿವರಣೆಯಿಂದ ತೃಪ್ತರಾಗದೆ ಅವರನ್ನು ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ಕರೆದೊಯ್ದರು.

ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಿದ ವೇಳೆ ಎಫ್‌ಐಆರ್ ಪ್ರತಿ, ಇತರೆ ದಾಖಲೆಗಳನ್ನು ತೋರಿಸಿದ ಆಂಧ್ರಪ್ರದೇಶದ ಪೊಲೀಸರು ತಾವು ಆರೋಪಿಯನ್ನು ವಶಕ್ಕೆ ಪಡೆದು ಕರೆದೊಯ್ಯುತ್ತಿರುವುದಾಗಿ ಸ್ಪಷ್ಟಪಡಿಸಿದರು.

ಇದರಿಂದ ನೈಜ ಸಂಗತಿ ಅರ್ಥ ಮಾಡಿಕೊಂಡ ಸ್ಥಳೀಯ ಪೊಲೀಸರು, ಆರೋಪಿಯನ್ನು ಕರೆದೊಯ್ಯಲು ಅನುಮತಿಸಿ, ಆಂಧ್ರ ಪೊಲೀಸರನ್ನು ಕಳುಹಿಸಿಕೊಟ್ಟರು.