ಹಾಸನ ಎಸ್ಪಿ ತಾಯಿ ಕಾರು ಅಪಘಾತ ಸೃಷ್ಟಿಸಿದ ವಿವಾದ; ಹಿಟ್ ಅಂಡ್ ರನ್, ಕೊಲೆ ಯತ್ನ ಪ್ರಕರಣ ದಾಖಲು

ಕುಣಿಗಲ್‌: ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ ಅವರ ತಾಯಿ ಅಜೀಜಾ ಪ್ರಯಾಣಿಸುತ್ತಿದ್ದ ಕಾರು ಕುಣಿಗಲ್ ಬಳಿ ಪಾದಚಾರಿಗೆ ಡಿಕ್ಕಿ ಹೊಡೆದಿದ್ದು ಪ್ರಕರಣ‌ ಈಗ ವಿವಾದಕ್ಕೀಡಾಗಿದೆ.
ಹಿಟ್ ಆ್ಯಂಡ್ ರನ್ ಪ್ರಶ್ನೆ ಮಾಡಿದ್ದಕ್ಕೆ ಅಜೀಜಾ ಅವರು ಗ್ರಾಮಸ್ಥರ ಮೇಲೆ ಕೊಲೆ ಯತ್ನದ ದೂರು ದಾಖಲು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಕುಣಿಗಲ್ ತಾಲೂಕಿನ ಬಿದನಗೆರೆ ಬಳಿ ಯುವಕನಿಗೆ ಗುದ್ದಿ ಕಾರು ನಿಲ್ಲಿಸದೆ ಹೋಗಿದ್ದನ್ನು ಪ್ರಶ್ನೆ ಮಾಡಿದ್ದಕ್ಕೆ ಕೊಲೆ ಯತ್ನದ ದೂರು ದಾಖಲು ಮಾಡಲಾಗಿದೆ ಎಂದು ಗ್ರಾಮಸ್ಥರು ಆರೋಪ ಮಾಡಿದ್ದಾರೆ.
ಆದರೆ, ಗ್ರಾಮಸ್ಥರ ಆರೋಪವನ್ನು ಅಜೀಜಾ ನಿರಾಕರಿಸಿದ್ದಾರೆ. ಅಪಘಾತದ ಗಾಯಾಳು ರಕ್ಷಣೆ ಮಾಡಲು ಹೋಗಿದ್ದ ನಮ್ಮ ಮೇಲೆಯೇ ಹಲ್ಲೆ ಮಾಡಲಾಗಿದೆ ಎಂದು ದೂರಿದ್ದಾರೆ. ಅಪಘಾತದಲ್ಲಿ ಗ್ರಾಮದ ಒಬ್ಬರು ಮತ್ತು ನಂತರದಲ್ಲಿ ನಡೆದ ವಾಗ್ವಾದದಲ್ಲಿ ಎಸ್ಪಿ ಸಂಬಂಧಿಕರೊಬ್ಬರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಗ್ರಾಮಸ್ಥರು ಕುಣಿಗಲ್‌ ಠಾಣೆಯಲ್ಲಿ ಹಿಟ್ ಆ್ಯಂಡ್ ರನ್ ಕೇಸು ದಾಖಲು ಮಾಡಿದ್ದರೆ, ಎಸ್ಪಿ ಸಂಬಂಧಿಕರು ಕೊಲೆ ಯತ್ನದ ದೂರು ದಾಖಲು ಮಾಡಿದ್ದಾರೆ.

ಏನಿದು ಪ್ರಕರಣ?:

ಅಜೀಜಾ ಅವರು ಸಂಬಂಧಿಕರೊಂದಿಗೆ ಹಾಸನದಿಂದ ಬೆಂಗಳೂರಿಗೆ ತಮ್ಮ ಸುಜುಕಿ ಎರ್ಟಿಗಾ ಕಾರಿನಲ್ಲಿ ತೆರಳುವಾಗ ಬಿದನಗೆರೆ ಬಳಿ ಪಾದಚಾರಿಗೆ ಗುದ್ದಿ ಪರಾರಿಯಾಗಲು ಯತ್ನಿಸಿದರು ಎನ್ನಲಾಗಿದೆ.

ಗ್ರಾಮಸ್ಥರು ಕಾರು ಅಡ್ಡಗಟ್ಟಿ ಪ್ರಶ್ನೆ ಮಾಡಿದ್ದಾರೆ. ಆಗ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಬಂಧಿಗಳು ಮತ್ತು ಬಿದನಗೆರೆ ಗ್ರಾಮಸ್ಥರ ನಡುವೆ ಜಟಾಪಟಿ ನಡೆದು 60 ವರ್ಷದ ಎ.ಜೆ. ಮೊಹಮ್ಮದ್ ಅಜೀಜಾ ಕೊಲೆ ಯತ್ನ ನಡೆದಿದೆ ಎಂದು ಬಿದನಗೆರೆಯ ಮೂವರ ವಿರುದ್ದ ಕುಣಿಗಲ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಅಜೀಜಾ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕುಣಿಗಲ್ ಪೊಲೀಸರು ಗಾಯಾಳುವಿನಿಂದ ಹೇಳಿಕೆ ಪಡೆಯಲಾಗಿದೆ ಎಂದು ಎಫ್ ಐಆರ್‌ನಲ್ಲಿ ಉಲ್ಲೇಖಿಸಿದ್ದಾರೆ. ಪೊಲೀಸ್ ಅಧಿಕಾರಿಯ ತಾಯಿ ಪ್ರಯಾಣಿಸುತ್ತಿದ್ದ ಕಾರು ಎಂಬ ಕಾರಣಕ್ಕೆ ಪೊಲೀಸರು ಪ್ರಕರಣ ತಿರುಚಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಹಣ ನೀಡುವಂತೆ ಒತ್ತಾಯ ಚಾಕು ತೋರಿಸಿ ಕೊಲೆ ಬೆದರಿಕೆ:
ಅಪಘಾತವಾದ ವ್ಯಕ್ತಿಯನ್ನು ಅಸ್ಪತ್ರೆಗೆ ಸೇರಿ ಸಲು ಪ್ರಯತ್ನಿಸಿದ್ದಾಗ, 10 ಜನರ ಗುಂಪು ಸುತ್ತುವರಿದು ಜಗಳಕ್ಕಿಳಿಯಿತು. ಕೈಯಲ್ಲಿ ಕೊಡೆ ಹಿಡಿದಿದ್ದ ವ್ಯಕ್ತಿ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಅಜೀಜಾ ದೂರು ನೀಡಿದ್ದಾರೆ. ರಕ್ಷಣೆಗೆ ಬಂದ ಸಹೋದರ ಎ.ಜೆ. ಹಸನ್‌ ಅಲಿ ಶೇಕ್‌ಗೆ ಹೊಡೆದಿದ್ದಾರೆ. ನಂತರ ಏಕಾಏಕಿ ಮೂವರು ನನ್ನ ಮೇಲೆ ಹಲ್ಲೆ ನಡೆಸಿದರು, ಗುಂಪಿನಲ್ಲಿದ್ದ ಮಹಿಳೆಯೊಬ್ಬರು ಕೈಯಲ್ಲಿ ಚಾಕು ತೆಗೆದುಕೊಂಡು ನನ್ನ ಕುತ್ತಿಗೆ ಬಳಿ ಇಟ್ಟು ಹಣ ನೀಡುವಂತೆ ಒತ್ತಾಯಿಸಿ, ಕೊಲ್ಲುವುದಾಗಿ ಬೆದರಿಕೆ ಹಾಕಿದರು ಎಂದು ದೂರಿನಲ್ಲಿ ವಿವರಿಸಿದ್ದಾರೆ.

ಸ್ಥಳೀಯರಿಂದ ಪ್ರತ್ಯೇಕ ದೂರು ದಾಖಲು:
ಘಟನೆ ಸಂಬಂಧ ಬಿದನಗೆರೆಯ ಗೋವಿಂದಯ್ಯ ಎಂಬುವರು ಪ್ರತ್ಯೇಕ ದೂರು ನೀಡಿದ್ದಾರೆ. ಗ್ರಾಮದ ಚಂದ್ರಪ್ಪ ಮತ್ತು ಕುಮಾರ ಎಡಭಾಗದಲ್ಲಿ ರಸ್ತೆ ದಾಟಲು ನಿಂತಿರುವಾಗ ಹಾಸನ ಕಡೆಯಿಂದ ಬಂದ ಕಾರು ಕುಮಾರ್‌ಗೆ ಡಿಕ್ಕಿ ಹೊಡೆದಿದೆ. ಚಾಲಕ ಕಾರನ್ನು ನಿಲ್ಲಿಸದೆ ಓಡಿ ಹೋಗಲು ಯತ್ನಿಸಿದಾಗ, ತಡೆದು ಕೇಳಿದೆವು, ಆಗ ಅವರು ತಮಿಳು ಭಾಷೆಯಲ್ಲಿ ನಮ್ಮನ್ನು ನಿಂದಿಸಿದರು. ಚಾಲಕ ಮತ್ತು ಇಬ್ಬರು ಮಹಿಳೆಯರು ನಮ್ಮನ್ನು ನೂಕಿ ಪರಾರಿಯಾದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.