ಹಾಸನ: ಹೇಮಾವತಿ ನದಿ ಒಡಲು ಬಗೆದು ಅಕ್ರಮವಾಗಿ ಮರಳು ದೋಚುತ್ತಿದ್ದ ಆಲೂರು ತಾಲೂಕಿನ ಹ್ಯಾರಗಳಲೆ, ಕಿತ್ತನಗರೆಯ ಮರಳು ದಾಸ್ತಾನು ಸ್ಥಳದ ಮೇಲೆ ಪೊಲೀಸ್, ಕಂದಾಯ ಹಾಗೂ ಗಣಿಗಾರಿಕೆ ಇಲಾಖೆ ಅಧಿಕಾರಿಗಳು ಜಂಟಿ ದಾಳಿ ನಡೆಸಿದ್ದು, ಅಪಾರ ಪ್ರಮಾಣದ ಮರಳು ಹಾಗೂ 2 ಗಣಿಗಾರಿಕೆ ಬೋಟ್ ಗಳನ್ನು ವಶಕ್ಕೆ ಪಡೆದಿದ್ದಾರೆ.
‘ಕನ್ನಡಪೋಸ್ಟ್‘ ನಲ್ಲಿ ಇಂದು ಸಂಜೆ ಅಕ್ರಮ ಮರಳು ದಂಧೆ ವಿಷಯದಲ್ಲಿ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವ ಬಗ್ಗೆ ಪ್ರಕಟವಾದ ವರದಿ ಗಮನಿಸಿದ ಸಂಸದ ಶ್ರೇಯಸ್ ಪಟೇಲ್, ಅಕ್ರಮ ಮರಳು ಗಣಿಗಾರಿಕೆ ಹಾಗೂ ಸಾಗಾಟ ತಡೆಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ಹೀಗಾಗಿ ಮುಸ್ಸಂಜೆ ವೇಳೆಯಲ್ಲಿ ಅಧಿಕಾರಿಗಳು ಕಡೆಗೂ ಕಣ್ತೆರೆದು ಅಕ್ರಮ ಮರಳು ದಂಧೆಯತ್ತ ನೋಡಿದರು.
ಹೇಮಾವತಿ ನದಿ ಒಡಲು ಬಗೆಯುತ್ತಿರುವ ಅಕ್ರಮ ಮರಳು ದಂಧೆಕೋರರು; ಕಣ್ಮುಚ್ಚಿ ಕುಳಿತ ಅಧಿಕಾರಿಗಳು

ಹೀಗಾಗಿ ಆಲೂರು ತಹಸೀಲ್ದಾರ್ ಪೂರ್ಣಿಮಾ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ನಾಗರಾಜು, ಆಲೂರು ಸಬ್‌ಇನ್ಸ್‌ಪೆಕ್ಟರ್ ಜನಾಬಾಯಿ ನೇತೃತ್ವದಲ್ಲಿ ದಾಳಿ ಮರಳು ದಂಧೆ ನಡೆಯುತ್ತಿದ್ದ ಸ್ಥಳದ ಮೇಲೆ ದಿಢೀರ್ ದಾಳಿ ನಡೆಸಲಾಯಿತು.
ಅಧಿಕಾರಿಗಳು ದಾಳಿ ನಡೆಸಿದ ತಕ್ಷಣ ದಂಧೆಕೋರರು ಸ್ಥಳದಿಂದ ಪರಾರಿಯಾದರು. ದಾಸ್ತಾನು ಮಾಡಿದ್ದ ಅಪಾರ ಪ್ರಮಾಣದ ಮರಳು, ಬೋಟ್‌ಗಳು ವಶಕ್ಕೆ ಪಡೆದ ಪೊಲೀಸರು ಅವುಗಳನ್ನು ಗಣಿಗಾರಿಕೆ ಇಲಾಖೆ ಸುಪರ್ದಿಗೆ ಒಪ್ಪಿಸಿದರು.