ಅರಸೀಕೆರೆ: ಪಕ್ಷಾಂತರ, ರಾಜೀನಾಮೆ, ಅನರ್ಹತೆ, ಇತ್ಯಾದಿ ಹಲವು ರಾಜಕೀಯ ಬೆಳವಣಿಗೆಗಳಿಂದಾಗಿ ತೀವ್ರ ಕುತೂಹಲ ಕೆರಳಿದ್ದ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಶಾಸಕ ಕೆ.ಎಂ.ಶಿವಲಿಂಗೇಗೌಡ ಪರ-ವಿರೋಧ ಗೋಜಲಿನಲ್ಲಿ ಎಲ್ಲೂ ಗುರುತಿಸಿಕೊಳ್ಳದೇ ಸೈಲೆಂಟಾಗಿದ್ದುಕೊಂಡೇ ತಮ್ಮ ಆಪ್ತರ ಮೂಲಕ ನಗರಸಭೆ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಹೊರಗೆ ಏನೇ ನಡೆಯಲಿ, ಒಳಗೆ ಹೀಗೆಯೇ ಆಗಲಿದೆ ಎಂದು ಎಲ್ಲರೂ ಲೆಕ್ಕಾಚಾರ ಮಾಡಿದಂತೆಯೇ ಜೆಡಿಎಸ್‌ನಿಂದ ಗೆದ್ದಿರುವ ಹಿರಿಯ ಸದಸ್ಯ ಹಾಗೂ ಮಾಜಿ ಅಧ್ಯಕ್ಷ ಸಮೀವುಲ್ಲಾ ಅವರೇ ಮತ್ತೊಮ್ಮೆ ನಗರಸಭೆ ಅಧ್ಯಕ್ಷರಾಗಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಮನೋಹರ್ ಮೇಸ್ತಿ ಆಯ್ಕೆಯಾದರು.
ಇಂದು ಬೆಳಗ್ಗೆ ಚುನಾವಣೆ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆಯೇ ಮೊದಲು ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಯಿತು. ಚುನಾವಣಾಧಿಕಾರಿಯಾಗಿ ಹಾಸನ ಉಪ ವಿಭಾಗಾಧಿಕಾರಿ ಮಾರುತಿ, ಸಹಾಯಕ ಚುನಾವಣಾಧಿಯಾಗಿ ನಗರಸಭೆ ಆಯುಕ್ತ ಕೃಷ್ಣಮೂರ್ತಿ ಕರ್ತವ್ಯ ನಿರ್ವಹಿಸಿದರು.
ಅಧ್ಯಕ್ಷ ಸ್ಥಾನಕ್ಕೆ ಸಮೀವುಲ್ಲಾ ಮತ್ತು ಜೆಡಿಎಸ್‌ನ ಸುಜಾತ ರಮೇಶ್ ನಾಮಪತ್ರ ಸಲ್ಲಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ಮನೋಹರ್ ಮೇಸ್ತಿ, ಮತ್ತು ಬಿಜೆಪಿಯ ಎಸ್.ಅಭಿರಾಮಿ ಉಮೇದುವಾರಿಕೆ ಸಲ್ಲಿಸಿದರು. ಒಟ್ಟು 31 ಸದಸ್ಯ ಬಲದ ನಗರಸಭೆಯಲ್ಲಿ 6 ಮಂದಿ ಜೆಡಿಎಸ್ ಮತ್ತು ಒಬ್ಬರು ಪಕ್ಷೇತರ ಸದಸ್ಯರು ಅನರ್ಹಗೊಂಡಿದ್ದರಿಂದ ಉಳಿಕೆ 24 ಸದಸ್ಯರು ಮತದಾನದ ಅವಕಾಶ ಪಡೆದಿದ್ದರು. ಈ ನಡುವೆ ಕಾಂಗ್ರೆಸ್ ಸದಸ್ಯ ವೆಂಕಟಮುನಿ ಎಂಬುವರು ತಟಸ್ಥವಾಗಿ ಉಳಿದರು.
ಯಾರ ಪರ ಅಥವಾ ವಿರೋಧ ಮತ ಹಾಕಲಿಲ್ಲ. ಮತ್ತೊಂದೆಡೆ ಬಿಜೆಪಿಯ ಗೀತಾ ಹೇಮಂತ್ ಅವರು ಗೈರು ಹಾಜರಾಗಿದ್ದರು. ಈ ನಡುವೆ ದಿಢೀರ್ ಬೆಳವಣಿ ಗೆಯಲ್ಲಿ ಜೆಡಿಎಸ್ ಸದಸ್ಯ ಈಶ್ವರಪ್ಪ ಹಾಸನಕ್ಕೆ ತೆರಳಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಅಲ್ಲಿಗೆ 21 ಸದಸ್ಯರು ಮಾತ್ರ ಮತದಾನ ಮಾಡುವ ಅವಕಾಶ ಪಡೆದಿದ್ದರು.
ನಾಮಪತ್ರ ವಾಪಸ್ ಪ್ರಕ್ರಿಯೆ ಆರಂಭವಾದ ನಂತರ ಚುನಾವಣೆ ಆರಂಭವಾಯಿತು. ಹಾಜರಿದ್ದ ಸದಸ್ಯರು ಕೈ ಎತ್ತುವ ಮೂಲಕ ತಮ್ಮ ಮತ ಯಾರಿಗೆ ಎಂಬುದನ್ನು ಖಾತ್ರಿ ಪಡಿಸಬೇಕು ಎಂದು ಚುನಾವಣಾಧಿಕಾರಿ ಹೇಳಿದರು. ಮತದಾನ ಪ್ರಕ್ರಿಯೆ ನಡೆದು ಸಮೀವುಲ್ಲಾ ಪರ 14 ಮತ ಚಲಾವಣೆಯಾದರೆ, ಸುಜಾತ ರಮೇಶ್ ಪರ 7 ಮತ ಬಿದ್ದವು. ಹಾಗೆಯೇ ಉಪಾಧ್ಯಕ್ಷರ ಚುನಾವಣೆಯಲ್ಲೂ ಇಷ್ಟೇ ಮತಗಳು ಹಂಚಿಕೆಯಾದವು. ಬಿಜೆಪಿ-ಜೆಡಿಎಸ್ ಕಡೆಯಿಂದ ವಿಪ್ ಜಾರಿ ಮಾಡಿದ್ದರೂ ಯಾವುದೇ ಲಾಭ ತಂದುಕೊಡಲಿಲ್ಲ. ಅಂತಿಮವಾಗಿ ಚುನಾವಣಾಧಿಕಾರಿ ಮಾರುತಿ ಅವರು ಸಮೀವುಲ್ಲಾ ಅಧ್ಯಕ್ಷರಾಗಿ, ಮನೋಹರ್ ಮೇಸ್ತಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಣೆ ಮಾಡಿದರು. ಚುನಾವಣೆ ಪ್ರಕ್ರಿಯೆ ಮುಗಿದ ನಂತರ ವಿಜೇತರು ಮತ್ತವರ ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ತೆರೆದ ವಾಹನದಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಿ ಸಂಭ್ರಮಾಚರಣೆ ಮಾಡಿದರು.