ಹಾಸನ: ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರ ಕಾರ್ಯವೈಖರಿ ಬಗ್ಗೆ ಅರಸೀಕೆರೆ ನಗರದ ಬಾಬಾಸಾಬ್ ಕಾಲನಿಯ ನಿವಾಸಿಗಳು ‘ಶಾಸಕರೇ ಎಲ್ಲಿದ್ದೀರಾ…..?’ ಎಂದು ಪ್ರಶ್ನಿಸುವ ಪೋಸ್ಟರ್ ಅಂಟಿಸುವ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ.
ಮಳೆಯಿಂದ ಬಡಾವಣೆಯ ಅನೇಕ ಮನೆಗಳು ಬಿದ್ದು ಹೋಗಿದ್ದು ಚರಂಡಿಗಳಲ್ಲಿ ಮಣ್ಣು ತುಂಬಿಕೊಂಡು ಕೊಳಚೆ ನೀರು ಹರಿಯುತ್ತಿಲ್ಲ. ಅತಿಯಾದ ಶೀತದಿಂದ ವಾಸದ ಮನೆಯ ಗೋಡೆಗಳು ಬಿರುಕು ಬಿಟ್ಟಿವೆ.
ಸೊಳ್ಳೆಗಳ ಕಾಟದಿಂದ ಡೆಂಘೀ ಜ್ವರ ಸೇರಿ ಹಲವು ಕಾಯಿಲೆಗಳಿಂದ ಕಾಲನಿಯ ಹಲವು ಜನರು ಬಾಧಿತರಾಗಿದ್ದಾರೆ. ಸರಿಯಾದ ಚರಂಡಿ, ರಸ್ತೆ ಇಲ್ಲದೆ ನಿವಾಸಿಗಳಉ ಪರದಾಡುತ್ತಿದ್ದಾರೆ.
ಕೆಲ ವರ್ಷಗಳ ಹಿಂದೆ ಅರಸೀಕೆರೆ ನಗರದಲ್ಲಿನ ಮುಸ್ಲಿಂ ಮೊಹಲ್ಲಗಳಿಗೆ ಶಾಸಕರು ಭೇಟಿ ನೀಡಿದ್ದರು. ಕಾಲನಿಯ ಸಮಸ್ಯೆಗಳ ಬಗ್ಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದರು. ಸಮಸ್ಯೆಗಳು ಉಲ್ಬಣಗೊಂಡರೂ ಶಾಸಕ ಕೆ.ಎಂ.ಶಿವಲಿಂಗೇಗೌಡ ಸ್ಪಂದಿಸದ ಹಿನ್ನಲೆಯಲ್ಲಿ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿ ಪೋಸ್ಟರ್ ಅಂಟಿಸಿದ್ದಾರೆ.
ಒಂದು ವರ್ಷಕ್ಕೆ ಒಂದು ಬಾರಿಯಾದರೂ ಭೇಟಿ ಕೊಟ್ಟಿದ್ದೀರಾ ನೀವು? ಮತ ಕೊಟ್ಟವರು ಸತ್ತಿದ್ದಾರಾ, ಇಲ್ಲಾ ಬದುಕಿದ್ದಾರಾ ಅಂತ ನೋಡಿ ಎಂದು ಕಟಕಿಯಾಡಿದ್ದಾರೆ.