ಹಾಸನ: ಅಪಘಾತದಲ್ಲಿ ದುರ್ಮರಣ ಹೊಂದಿದ ಯುವ ಐಪಿಎಸ್ ಅಧಿಕಾರಿ ಹರ್ಷಬರ್ಧನ್ ಅವರ ಸಂಬಂಧಿಕರು ಮಧ್ಯಪ್ರದೇಶದಿಂದ ಆಗಮಿಸಿದ್ದು, ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಅಂತಿಮ ದರ್ಶನ ಪಡೆದರು.
ಬೆಳಗ್ಗೆಯಿಂದ ಹಿಮ್ಸ್ ಆಸ್ಪತ್ರೆಯಲ್ಲೇ ಇರುವ ದಕ್ಷಿಣ ವಲಯ ಐಜಿಪಿ ಡಾ. ಬೋರಲಿಂಗಯ್ಯ ಹಾಗೂ ಎಸ್ಪಿ ಮಹಮದ್ ಸುಜೀತಾ ಮರಣೋತ್ತರ ಪರೀಕ್ಷೆ ಪ್ರಕ್ರಿಯೆಗೆ ಅಗತ್ಯ ವ್ಯವಸ್ಥೆ ಕಲ್ಪಿಸಿದರು. ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಹಿತೇಂದ್ರ ಆಸ್ಪತ್ರೆಗೆ ಆಗಮಿಸಿ ಮೃತದೇಹದ ಅಂತಿಮ ದರ್ಶನ ಪಡೆದರು.
ಹರ್ಷಬರ್ಧನ್ ಅವರ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುವುದು. ಮೃತದೇಹವನ್ನು ಅಂಬ್ಯುಲೆನ್ಸ್ ಮೂಲಕ ಬೆಂಗಳೂರಿಗೆ ಕೊಂಡೊಯ್ಯಲಾಗುತ್ತದೆ.
ಮಧ್ಯಪ್ರದೇಶಕ್ಕೆ ರವಾನೆ:
ಹರ್ಷಬರ್ಧನ್ ಅವರ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲು ಕುಟುಂಬಸ್ಥರು ಬೆಂಗಳೂರಿನಿಂದ ವಿಮಾನದ ಮೂಲಕ ಮಧ್ಯಪ್ರದೇಶಕ್ಕೆ ಮೃತದೇಹವನ್ನು ಕೊಂಡೊಯ್ಯಲಿದ್ದಾರೆ.
ಹೃದಯ ವಿದ್ರಾವಕ ಘಟನೆ ಪೊಲೀಸ್ ಅಧಿಕಾರಿಗಳು ಮತ್ತು ಜನಸಾಮಾನ್ಯರಲ್ಲಿ ಆಘಾತವನ್ನುಂಟುಮಾಡಿದೆ.