ತೆರಿಗೆ ವಂಚಿಸುತ್ತಿದ್ದ ಕೇರಳ ಖಾಸಗಿ ಬಸ್ ವಶಕ್ಕೆ ಪಡೆದ ಆರ್.ಟಿ.ಒ. ಇನ್ಸ್ ಪೆಕ್ಟರ್ ಯಶವಂತ್

ಕುಟ್ಟ ಗಡಿಯಲ್ಲಿ ಅಕ್ರಮವಾಗಿ ಒಳ ನುಸುಳುತ್ತಿರುವ ಕೇರಳ ನೋಂದಣಿ ಹಳದಿ ಬೋರ್ಡ್ ವಾಹನಗಳು

ಹಾಸನ: ಕರ್ನಾಟಕ ರಾಜ್ಯ ಪ್ರವೇಶ ತೆರಿಗೆ ಪಾವತಿಸಿರುವುದಾಗಿ ನಕಲಿ ರಸೀದಿ ಸೃಷ್ಟಿಸಿ ಸಂಚರಿಸುತ್ತಿದ್ದ ಕೇರಳ ನೋಂದಣಿ ಸಂಖ್ಯೆ ಹೊಂದಿದ್ದ ಖಾಸಗಿ ಬಸ್ಸನ್ನು ಪ್ರಾದೇಶಿಕ ಸಾರಿಗೆ ಕಚೇರಿ ಅಧಿಕಾರಿಗಳು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ನಗರ ಹೊರವಲಯದ ಹೊಯ್ಸಳ ವಿಲೇಜ್‌ ರೆಸಾರ್ಟ್‌ ಬಳಿ ಹಿರಿಯ ಮೋಟಾರು ವಾಹನ ನಿರೀಕ್ಷಕ ಪಿ.ಆರ್.ಯಶವಂತ್‌ ವಾಹನಗಳ ತಪಾಸಣೆ ನಡೆಸುತ್ತಿದ್ದಾಗ ಕೇರಳದಿಂದ ಚಿಕ್ಕಮಗಳೂರಿಗೆ ತೆರಳುತ್ತಿದ್ದ ಮ್ಯಾಕ್ಸಿ ಕ್ಯಾಬ್‌ ತಡೆದು ದಾಖಲೆಗಳನ್ನು ಪರಿಶೀಲಿಸಲು ಮುಂದಾದರು.
ಆಗ ವಾಹನ ಚಾಲಕ ೧೬೩೧೭ ರೂ. ಕರ್ನಾಟಕ ರಾಜ್ಯ ಪ್ರವೇಶ ತೆರಿಗೆಯನ್ನು ಪಾವತಿಸಿರುವುದಾಗಿ ರಸೀದಿಯನ್ನು ಹಾಜರುಪಡಿಸಿದ. ಅದನ್ನು ಗಮನಿಸಿದಾಗ ಅನುಮಾನಗೊಂಡ ಯಶವಂತ್‌, ರಸೀದಿಯ ಅಸಲಿಯತ್ತನ್ನು ಪರಿಶೀಲಿಸಿದಾಗ ಅದು ನಕಲಿ ಎನ್ನುವುದು ಪತ್ತೆಯಾಯಿತು.
ತಕ್ಷಣವೇ ವಾಹನವನ್ನು ವಶಕ್ಕೆ ಪಡೆದ ಅವರು, ರಾಜ್ಯ ಸರ್ಕಾರಕ್ಕೆ ಬೊಕ್ಕಸಕ್ಕೆ ವಂಚಸಿರುವ ಪ್ರಕರಣ ದಾಖಲಿಸಿದರು.
ಕೇರಳ ಹಳದಿ ಬೋರ್ಡ್‌ ವಾಹನಗಳು ಕೊಡಗಿನ ಕುಟ್ಟ ಗಡಿ ಭಾಗದಲ್ಲಿ ಕಣ್ತಪ್ಪಿಸಿ ಕರ್ನಾಟಕದೊಳಗೆ ಪ್ರವೇಶ ಪಡೆದು ಅಕ್ರಮವಾಗಿ ಸಂಚರಿಸುತ್ತಿದ್ದು, ತಮ್ಮ ಕಳ್ಳಾಟ ಮರೆ ಮಾಡಿಕೊಳ್ಳಲು ನಕಲಿ ರಸೀದಿ ಸೃಷ್ಟಿಸುತ್ತಿದ್ದಾರೆ ಎನ್ನಲಾಗಿದ್ದು, ಇದಕ್ಕೆ ತಡೆಯೊಡ್ಡಲು ಪ್ರಾದೇಶಿಕ ಸಾರಿಗೆ ಕಚೇರಿಯಿಂದ ವಾಹನಗಳ ವಿಶೇಷ ತಪಾಸಣೆ ಕಾರ್ಯಾಚರಣೆ ಆರಂಭಿಸಲಾಗಿದೆ.
(ಹೇಳಿಕೆ)
ಬೇಲೂರು ರಸ್ತೆಯಲ್ಲಿ ವಾಹನಗಳ ದಾಖಲೆ ಪರಿಶೀಲಿಸುವಾಗ ಕೇರಳ ನೋಂದಣಿ ಸಂಖ್ಯೆ ಹೊಂದಿದ್ದ ಖಾಸಗಿ ಬಸ್‌ ಚಾಲಕ ಹಾಜರುಪಡಿಸಿದ ಕರ್ನಾಟಕ ಪ್ರವೇಶ ತೆರಿಗೆಯ ರಸೀದಿ ಬಗ್ಗೆ ಅನುಮಾನ ಮೂಡಿದು. ಹೆಚ್ಚಿನ ಪರಿಶೀಲನೆ ನಂತರ ಅದು ನಕಲಿ ಎನ್ನುವುದು ಖಚಿತವಾಯಿತು. ವಾಹನ ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ.
ಪಿ.ಆರ್‌.ಯಶವಂತ್‌, ಹಿರಿಯ ಮೋಟಾರು ವಾಹನ ನಿರೀಕ್ಷಕರು, ಹಾಸನ