ಹಾಸನ: ರಾಜ್ಯ ಸರ್ಕಾರದ 2025–26ನೇ ಸಾಲಿನ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿದ ಜೆಡಿಎಸ್ ನಾಯಕ, ಮಾಜಿ ಸಚಿವ ಎಚ್.ಡಿ. ರೇವಣ್ಣ, ಹಾಸನ ಜಿಲ್ಲೆಗೆ ಯಾವುದೇ ಮಹತ್ವದ ಯೋಜನೆ ಸಿಕ್ಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಜೂಜು, ಎಣ್ಣೆ, ಮಟ್ಕಾ, ಗಾಂಜಾ ಗ್ಯಾರಂಟಿ ಮಾತ್ರ!”
ರಾಜ್ಯದ ಐದು ಗ್ಯಾರಂಟಿಗಳು ಮುಂದುವರೆದಿದ್ದರೂ, ಹಾಸನ ಜಿಲ್ಲೆಗೆ ಯಾವುದೂ ಸಿಕ್ಕಿಲ್ಲ ಎಂದು ವ್ಯಂಗ್ಯವಾಡಿದ ಅವರು, “ನಮ್ಮ ಜಿಲ್ಲೆಗೆ ಹೆಚ್ಚುವರಿಯಾಗಿ ಜೂಜು, ಎಣ್ಣೆ, ಮಟ್ಕಾ, ಗಾಂಜಾ ಗ್ಯಾರೆಂಟಿ ಕೊಟ್ಟಿದ್ದಾರೆ. ಜಿಲ್ಲೆಯ ಜನ ಸರ್ಕಾರಕ್ಕೆ ಧನ್ಯವಾದ ಹೇಳಬೇಕು” ಎಂದು ಸುದ್ದಿಗೋಷ್ಠಿಯಲ್ಲಿ ಹರಿಹಾಯ್ದರು.
ಬಜೆಟ್‌ನಲ್ಲಿ ನಿರೀಕ್ಷಿಸಿದ್ದರೂ…
- ತೋಟಗಾರಿಕೆ ಕಾಲೇಜು ಮಂಜೂರು ಮಾಡುತ್ತಾರೆ ಎಂಬ ನಿರೀಕ್ಷೆ ವ್ಯರ್ಥವಾಗಿದೆ.
- ಫ್ಲೈಓವರ್‌ಗೆ ಅನುದಾನ ನಿರೀಕ್ಷಿಸಿದ್ದರೂ, ಬಜೆಟ್‌ನಲ್ಲಿ ಏನೂ ಇಲ್ಲ.
- ಕುಮಾರಸ್ವಾಮಿ ಸಿಎಂ ಆಗಿದ್ದಾಗ ಜಾರಿಗೆ ತಂದ ಯೋಜನೆಗಳಿಗೆ ಮುಂದುವರಿದ ಅನುದಾನ ನೀಡಲಿಲ್ಲ.
- ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ನೂರು ಕೋಟಿ ರೂಮ ನೀಡಬೇಕಿತ್ತು, ಆದರೆ ಕೊಟ್ಟಿಲ್ಲ.
“ಹಾಸನ ಕರ್ನಾಟಕದ ಬಜೆಟ್ ಬುಕ್‌ನಲ್ಲಿ ಇಲ್ಲ, ದೆಹಲಿ ಬಜೆಟ್ ಬುಕ್‌ನಲ್ಲಿ ಮಾತ್ರ ಇದೆ” ಎಂದರು.
ರಾಜ್ಯ ಸರ್ಕಾರ ಹಾಸನ ಜಿಲ್ಲೆಗೆ ಯಾವುದೇ ಯೋಜನೆ ನೀಡಿಲ್ಲ ಎಂದು ಟೀಕಿಸಿದ ಅವರು, “ಕೇಂದ್ರ ಸರ್ಕಾರದಿಂದ ಜಿಲ್ಲೆಗೆ ಬೇಕಾದ ಯೋಜನೆಗಳನ್ನು ತರುವ ಶಕ್ತಿ ದೇವೇಗೌಡರಿಗೆ ಇದೆ” ಎಂದರು.
ಅಲ್ಪಸಂಖ್ಯಾತರ ಪ್ರದೇಶಗಳ ಕಡೆಗಣನೆ
- ಹಾಸನ ನಗರದ ಅಲ್ಪಸಂಖ್ಯಾತರು ವಾಸಿಸುವ ಪ್ರದೇಶಗಳಲ್ಲಿ ರಸ್ತೆ ನಿರ್ಮಾಣದ ಅನುದಾನ ನೀಡಬಹುದಿತ್ತು.
- ಕನಿಷ್ಠ 1,000 ವಸತಿ ಗೃಹಗಳನ್ನಾದರೂ ಮಂಜೂರು ಮಾಡಬಹುದಿತ್ತು ಎಂದರು.
“ಕೆಲವರು ಟೀಕೆ ಮಾಡ್ತಾರೆ, ಆದರೆ ನಾನು ಎದೆಗುಂದುವುದಿಲ್ಲ”
- ಹಾಸನ ಮಹಾನಗರ ಪಾಲಿಕೆ ಘೋಷಣೆಯಾಗಿದ್ದರೂ, ಅದರ ಅಭಿವೃದ್ಧಿಗೆ ಸರ್ಕಾರ ಯಾವುದೇ ಅನುದಾನ ಮೀಸಲಿಟ್ಟಿಲ್ಲ.
- “ಮುಂದಿನ ಚುನಾವಣೆಗೆ ಹಾಸನ ಮಹಾನಗರ ಪಾಲಿಕೆ ಆಗಬಹುದು, ಆದರೆ ಬೆಳವಣಿಗೆಗೆ ಹಣವೇ ಇಲ್ಲ” ಎಂದರು.
- “ಈ ಸರ್ಕಾರ ಹಾಸನ ಜಿಲ್ಲೆಯ ಬೆಳವಣಿಗೆಯನ್ನು ಸಹಿಸಲಾರದು” ಎಂದು ಟೀಕಿಸಿದರು.
ಪೊಲೀಸ್ ವ್ಯವಸ್ಥೆ ಹದಗೆಟ್ಟಿದೆ – ರೇವಣ್ಣ ಆರೋಪ
- “ಕರ್ತವ್ಯದಲ್ಲಿರುವಾಗಲೇ ಕೆಲವು ಪೊಲೀಸರು ಸಂಜೆ ಏಳು ಗಂಟೆಗೆ ಎಣ್ಣೆ ಹಾಕ್ತಾರೆ, ಪೊಲೀಸರು ಕೆಲಸ ಮುಗಿಸಿ ಮನೆಗೆ ಹೋಗಿ ಕುಡಿಯಲಿ ನಾನು ಬೇಡ ಅನ್ನಲ್ಲ, ಕತ್ಯವ್ಯದಲ್ಲಿದ್ದಾಗಲೇ ಪೊಲೀಸರು ಎಣ್ಣೆ ಹಾಕ್ತಾರೆ. ಕಂಪ್ಲೆಂಟ್ ಕೊಡಲು ಬಂದವರನ್ನು ಬಾಯಿಗೆ ಬಂದಂತೆ ಬೈಯ್ತಾರೆ ಎಂದು ಆರೋಪಿಸಿದ್ರು
- ಎಲ್ಲೆಡೆ ವೀಲ್ಹಿಂಗ್ ಮಾಡುತ್ತಿದ್ದಾರೆ. ಇದಕ್ಕೆಲ್ಲ ಎಸ್ಪಿ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.
- “ಮಟ್ಕಾ, ಜೂಜು, ಮದ್ಯ ಸೇವನೆ ಚಟದಿಂದ ಮನೆಗಳ ಹೆಣ್ಣುಮಕ್ಕಳು ಒಡವೆ ಮಾರಿಕೊಳ್ಳುವ ಪರಿಸ್ಥಿತಿ ಬಂದಿದೆ”.
- “ಎಸ್ಪಿಯವರ ಕೆಳಮಟ್ಟದ ಅಧಿಕಾರಿಗಳು ಅವರ ನಿಯಂತ್ರಣದಲ್ಲಿಲ್ಲ” ಎಂದು ಆರೋಪಿಸಿದರು.