ಕನ್ನಡ ಫೋಸ್ಟ್ ವರದಿ
ಚನ್ನರಾಯಪಟ್ಟಣ: ಮನುಕುಲದ ಧಾರ್ಮಿಕ ಶ್ರದ್ಧೆಯ ಸ್ಥಳವಾಗಿ ದೇಗುಲ ನಿರ್ಮಿಸಲಾಗುತ್ತದೆಯೇ ಹೊರತು ದೇವರಿಗೆ ನೆಲೆ ಕಲ್ಪಿಸಬೇಕು ಎಂದಲ್ಲ ಎಂದು ಶ್ರೀ ಗದ್ದೆರಾಮೇಶ್ವರ ದೇಗುಲದ ಅರ್ಚಕ ರಾಮು ಗುಡಿಭಟ್ಟ ಹೇಳಿದರು.
ತಾಲೂಕಿನ ಉಳ್ಳಾವಳ್ಳಿ ಗ್ರಾಮದಲ್ಲಿ ಶ್ರೀವೇಣುಗೋಪಾಲಸ್ವಾಮಿ ಹಾಗೂ ಶ್ರೀ ಆಂಜನೇಯಸ್ವಾಮಿ ದೇಗುಲ ಜೀರ್ಣೋದ್ಧಾರ ಸಮಿತಿ ವತಿಯಿಂದ 35 ಲಕ್ಷ ರೂ. ವೆಚ್ಚದಲ್ಲಿ ಜೀರ್ಣೋದ್ಧಾರಗೊಳ್ಳಲಿರುವ ಶ್ರೀ ವೇಣುಗೋಪಾಲಸ್ವಾಮಿ ಹಾಗೂ ಶ್ರೀ ಆಂಜನೇಯಸ್ವಾಮಿ ದೇಗುಲ ನಿರ್ಮಾಣ ಕಾರ್ಯಕ್ಕೆ ಬುಧವಾರ ವಿಶೇಷ ಭೂಮಿಪೂಜೆ ನೆರವೇರಿಸಿ ಆಶೀರ್ವದಿಸಿದರು.
ಈ ಭೂಮಂಡಲಕ್ಕೆ ದೇವರೆ ಸೃಷ್ಠಿಕರ್ತನಾಗಿದ್ದು ದೈವನಿಲ್ಲದ ಜಾಗವೇ ಇಲ್ಲ. ಭೂಮಿಯ ಮೇಲಿನ ಪ್ರತಿಯೊಂದು ವಸ್ತು ಹಾಗೂ ಕಣಕಣದಲ್ಲಿಯೂ ದೇವರಿದ್ದಾನೆ. ಆದರೆ ಪೂಜಿಸಲೆಂದು ನಿರ್ದಿಷ್ಟ ಸ್ಥಳ ಗುರುತಿಸುವ ಸಲುವಾಗಿ ದೇಗುಲ ನಿರ್ಮಿಸಲಾಗುತ್ತದೆ ಎಂದರು.
ದಿಡಗ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ, ನಿರ್ದೇಶಕ ಎಚ್.ಕೆ.ಯೋಗೇಶ್ ಮಾತನಾಡಿ, ಊರು, ಜನತೆ ನೆಮ್ಮದಿ ಮತ್ತು ಕ್ಷೇಮದಿಂದ ಬದುಕು ಕಟ್ಟಿಕೊಳ್ಳಬೇಕೆಂದರೆ ಗ್ರಾಮಗಳಲ್ಲಿರುವ ಶಾಲೆ ಹಾಗೂ ಧಾರ್ಮಿಕ ಕೇಂದ್ರಗಳು ಸುರಕ್ಷಿತ ಹಾಗೂ ಸುಂದರವಾಗಿರಬೇಕು ಎಂದರು.
ವಿದ್ಯಾ ಕೇಂದ್ರಗಳು ಹಾಗೂ ದೇಗುಲಗಳು ಶಿಥಿಲಗೊಂಡಿದ್ದರೆ
ಅಥವಾ ಪಾಳು ಬಿದ್ದಿದ್ದರೆ ಅಂತಹ ಊರು ಸ್ಮಶಾನದಂತೆ ಗೋಚರಿಸಲಿವೆ. ದೇಗುಲಗಳಲ್ಲಿ ಭಕ್ತಿಯೊಂದಿಗೆ ನೆಮ್ಮದಿ ಹಾಗೂ
ಮುಕ್ತಿ ಲಭಿಸಿದರೆ ಶಾಲೆಗಳಲ್ಲಿ ಉತ್ತಮ ಸಂಸ್ಕಾರ ಸಿಗಲಿದೆ ಎಂದು ತಿಳಿಸಿದರು.
ದೇಗುಲ ಜೀರ್ಣೋದ್ಧಾರಕ್ಕೆ ಧನ ಸಹಾಯ ಅಥವಾ ಭಕ್ತಿ ಸಮರ್ಪಣೆ ಮಾಡುವಂತಹ ಭಕ್ತರು ಸಮಿತಿಯ ಮುಖ್ಯಸ್ಥ ಎಚ್.ಎಸ್.ವೆಂಕಟೇಶ್ ಹಾಗೂ ಎಚ್.ಕೆ.ಯೋಗೇಶ್(೯೯೭೨೬೫೩೧೨೨) ಅವರನ್ನು ಸಂಪರ್ಕಿಸಬಹುದು ಎಂದು ಸಮಿತಿ ತಿಳಿಸಿದೆ.
ಗುಡಿಭಟ್ಟರು ವಿಶೇಷ ಕಳಶ ಪ್ರತಿಷ್ಠಾಪನೆಯೊಂದಿಗೆ ತಳಹದಿ ಪೂಜೆ ನೆರವೇರಿಸಿ ದೇವರ ಮೂಲೆಯಲ್ಲಿ ಅಡಿಗಲ್ಲು ಪ್ರತಿಷ್ಠಾಪಿಸಿದರು. ಪ್ರಧಾನ ಅರ್ಚಕರಾದ ರಂಗಯ್ಯ, ವೆಂಕಟೇಶ್ ಹಾಗೂ ವರದರಾಜು ಪೂಜಾ ವಿಧಿ ವಿಧಾನಗಳನ್ನು ನಡೆಸಿದರು.
ಶ್ರೀ ವೇಣುಗೋಪಾಲಸ್ವಾಮಿ ಹಾಗೂ ಶ್ರೀ ಆಂಜನೇಯಸ್ವಾಮಿ ದೇಗುಲ ಜೀರ್ಣೋದ್ಧಾರ ಸಮಿತಿಯ ಮುಖ್ಯಸ್ಥರಾದ ಎಚ್.ಎಸ್.ವೆಂಕಟೇಶ್, ಎಚ್.ಕೆ.ಯೋಗೇಶ್, ಪ್ರಮುಖರಾದ ಗೌಡಪ್ಪರ ರಾಮೇಗೌಡ, ರಾಮಚಂದ್ರು, ಎಚ್.ಬಿ.ರಂಗಸ್ವಾಮಿ, ಎಚ್.ಪಿ.ಅಣ್ಣಪ್ಪಸ್ವಾಮಿಗೌಡ, ಮಹೇಶ್, ಬಾಲಕೃಷ್ಣ, ರಘು ಹಾಗೂ ಗ್ರಾಮಸ್ಥರು ಇದ್ದರು.