ಹಾಸನ: ನಗರದ ರಾಜೀವ್ ತಾಂತ್ರಿಕ ಮಹಾವಿದ್ಯಾಲಯಕ್ಕೆ ರಾಷ್ಟ್ರೀಯ ಮೌಲ್ಯಮಾಪನ ಮಾನ್ಯತಾ ಮಂಡಳಿಯಿಂದ “ಎ” ಗ್ರೇಡ್ ಮಾನ್ಯತೆ ದೊರಕಿದೆ ಎಂದು ರಾಜೀವ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಡಾ. ರಚನಾ ರಾಜೀವ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಆಯೋಜಿಸಿದ್ದ ಪತ್ರಿಕಾ ಸಂವಾದದಲ್ಲಿ ಅವರು ಮಾತನಾಡಿದರು.
ಇದೇ ನವೆಂಬರ್ 14 ಮತ್ತು 15 ರಂದು NAAC ತಂಡ ಕಾಲೇಜಿಗೆ ಭೇಟಿ ನೀಡಿತ್ತು. ಈ ತಂಡ ಕಾಲೇಜಿನಲ್ಲಿ ಲಭ್ಯವಿರುವ ಸವಲತ್ತುಗಳನ್ನು ಪರಿಶೀಲನೆ ನಡೆಸಿತು.
ಪಠ್ಯಕ್ರಮದ ಅಂಶಗಳು, ಬೋಧನೆ-ಕಲಿಕೆ ಮತ್ತು ಮೌಲ್ಯಮಾಪನ, ಸಂಶೋಧನೆ, ನಾವೀನ್ಯತೆ ಮತ್ತು ವಿಸ್ತರಣೆಗಳು, ಮೂಲಸೌಕರ್ಯ ಮತ್ತು ಕಲಿಕೆ ಸಂಪನ್ಮೂಲಗಳು, ವಿದ್ಯಾರ್ಥಿ ಬೆಂಬಲ ಮತ್ತು ಪ್ರಗತಿ, ಆಡಳಿತ, ನಾಯಕತ್ವ ಮತ್ತು ನಿರ್ವಹಣೆ ಹಾಗೂ ಸಾಂಸ್ಥಿಕ ಮೌಲ್ಯಗಳನ್ನು ಪರಿಶೀಲಿಸಿ ಅದರ ಆಧಾರದ ಮೇಲೆ “A” ಗ್ರೇಡ್ ಮಾನ್ಯತೆಯನ್ನು ನೀಡಿದೆ ಎಂದರು.
ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ದಿವಂಗತ ಡಾ.ರಾಜೀವ್ ಅವರು ಮಕ್ಕಳ ತಜ್ಞ ವೈದ್ಯರಾಗಿದ್ದರೂ ಹಾಸನದ ಅಭಿವೃದ್ಧಿ ಬಗ್ಗೆ, ಶೈಕ್ಷಣಿಕ ಕ್ಷೇತ್ರದ ಬಗ್ಗೆ ಮುನ್ನೋಟ ಹೊಂದಿದ್ದರು. ಅದೇ ಕಾರಣಕ್ಕಾಗಿ ಅವರು ರಾಜೀವ್ ಎಜ್ಯುಕೇಷನ್ ಟ್ರಸ್ಟ್ ಮೂಲಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದರು. ಅವರ ದೂರದೃಷ್ಟಿ ಫಲವಾಗಿ ಇಂದು ಸಾವಿರಾರು ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆಯುತ್ತಿದ್ದಾರೆ ಎಂದರು.
ನಮ್ಮ ತಂದೆ ಡಾ.ರಾಜೀವ್ ಅವರು ಕಟ್ಟಿ, ಬೆಳೆಸಿದ ಸಂಸ್ಥೆಯನ್ನು ನಾವು ಅವರು ನಂಬಿದ್ದ ಮಾರ್ಗವನ್ನು ಪಾಲಿಸುತ್ತಲೇ ಉಳಿಸಿ ಇನ್ನಷ್ಟು ವಿಸ್ತಾರವಾಗಿ ಬೆಳೆಸುವ ಮೂಲಕ ಈ ಭಾಗದ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ಒದಗಿಸುವ ಸಂಕಲ್ಪ ಹೊಂದಿದ್ದೇವೆ. ಮುಂದಿನ ದಿನಗಳಲ್ಲಿ ಮೆಡಿಕಲ್ ಕಾಲೇಜು ಸ್ಥಾಪಿಸುವ ಉದ್ದೇಶವಿದೆ ಎಂದರು.
ರಾಜೀವ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಬಿ.ಎನ್. ರತ್ನ ಉಪಾಧ್ಯಕ್ಷ ಡಾ. ರಂಜಿತ್ ರಾಜೀವ್ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಡಾ. ಪಿ.ಕೆ.ಮಹೇಶ್, ರಾಜೀವ್ ಆಯುರ್ವೇದ ಕಾಲೇಜು ಪ್ರಾಂಶುಪಾಲ ಡಾ.ಎಸ್.ಎ.ನಿತಿನ್ ಇದ್ದರು.