ಹಾಸನ; ಈ ಬಾರಿ ಹಾಸನಾಂಬೆ ದರ್ಶನಕ್ಕೆ 20 ಲಕ್ಷ ಭಕ್ತರನ್ನು ನಿರೀಕ್ಷಿಸಲಾಗಿದ್ದು, ಜಿಲ್ಲಾಡಳಿತದಿಂದ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಹೇಳಿದರು.
ಹಾಸನಾಂಬ ದೇವಾಲಯದ ಗರ್ಭಗುಡಿ ಬಾಗಿಲು ತೆಗದು ದೇವಿ ವಿಶ್ವರೂಪ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಇದು ಚಿರಸ್ಮರಣೀಯವಾದ ದಿನ. ಹಾಸನಾಂಬೆ ದೇವಾಲಯದ ಗರ್ಭಗುಡಿ ಬಾಗಿಲು ತೆಗೆಯುವುದು ಇತಿಹಾಸದಲ್ಲಿ ಉಳಿಯುವ ಸಂದರ್ಭವಾಗಿದೆ.
ಜಾತ್ರೆಯನ್ನು ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ. ಆದರೆ ಈ ಬಾರಿ ದರ್ಶನ ಅವಧಿ ಕಡಿಮೆಯಾಗಿದೆ. ಕಳೆದ ವರ್ಷ 14.40 ಲಕ್ಷ ಜನರು ದರ್ಶನ ಪಡೆದಿದ್ದರು. ಈ ಬಾರಿ 20 ಲಕ್ಷ ಭಕ್ತರನ್ನು ನಿರೀಕ್ಷಿಸಲಾಗಿದೆ. ಅದಕ್ಕೆ ತಕ್ಕಂತೆ ಎಲ್ಲ ವ್ಯವಸ್ಥೆ ಮಾಡಲಾಗಿದೆ.
ಉತ್ತಮ ಸೌಲಭ್ಯಗಳೊಂದಿಗೆ ಅಡಚಣೆಗಳಿಲ್ಲದ ದರ್ಶನ ವ್ಯವಸ್ಥೆ ದೊರಕಿಸುತ್ತೇವೆ. ಇದಕ್ಕೆ ನಾನು ಎಲ್ಲರ ಸಹಕಾರ ಕೋರುತ್ತೇನೆ. ಕಳೆದ ಬಾರಿಯ ಲೋಪಗಳನ್ನು ಸರಿಪಡಿಸಿಕೊಳ್ಳಲು ಸೂಚನೆ ನೀಡಿದ್ದೇನೆ. ತಪ್ಪುಗಳು ಪುನರಾವರ್ತನೆ ಆಗದಂತೆ ಜಿಲ್ಲಾಡಳಿತ ಎಚ್ಚರಿಕೆ ವಹಿಸಿದೆ.
ಕಾರ್ಯಕ್ರಮಕ್ಕೆ ಆಗಮಿಸಿರುವ ಪೂಜ್ಯರು ಈ ಜಾತ್ರೋತ್ಸವಲ್ಲಿ ವಿಘ್ನಗಳು ಬಾರದಂತೆ ಆಶೀರ್ವದಿಸಬೇಕು. ಅವರಿಗೆ ಜಿಲ್ಲೆಯ ಎಲ್ಲ ಜನರ ಪರವಾಗಿ ಕೃತಜ್ಞತೆ ವ್ಯಕ್ತಪಡಿಸುತ್ತೇನೆ ಎಂದರು.
ಎಲ್ಲ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ರೂಪಿಸಿ ಜನರ ಪ್ರೀತಿ ಗಳಿಸಲು ಜಿಲ್ಲಾಡಳಿತದ ಅಧಿಕಾರಿಗಳು ವೈಯಕ್ತಿಕ ಕಾರ್ಯಕ್ರಮ ಎಂದೇ ಭಾವಿಸಿ ಹಗಲಿರುಳು ಕೆಲಸ ಮಾಡಿದ್ದಾರೆ. ಮೈಸೂರು ದಸರಾ ಮೀರಿಸುವ ವಿದ್ಯುತ್ ದೀಪದ ಅಲಂಕಾರ ಮಾಡಲಾಗಿದೆ. ವಿದ್ಯುತ್ ದೀಪಾಲಂಕಾರ ವೀಕ್ಷಿಸಲು ಡಬಲ್ ಡೆಕ್ಕರ್ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಸಿಎಂ, ಡಿಸಿಎಂ, ಹೈಕೋರ್ಟ್ ನ್ಯಾಯಾಧೀಶರು ಸೇರಿದಂತೆ ಹೊರರಾಜ್ಯಗಳ ಗಣ್ಯರೂ ದರ್ಶನಕ್ಕೆ ಬರುವ ನಿರೀಕ್ಷೆ ಇದೆ. ಎಲ್ಲರೂ ಹಾಸನದ ಕೀರ್ತಿಯನ್ನು ತಮ್ಮೂರಿಗೆ ಕೊಂಡೊಯ್ಯುವಂತಹ ನಡವಳಿಕೆಯನ್ನು ನಾವು ಪ್ರದರ್ಶಿಸಬೇಕು ಎಂದರು.
ಆದಿಚುಂಚನಗಿರಿ ಮಹಾಸಂಸ್ಥಾನದ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಸಿದ್ದಗಂಗಾ ಕ್ಷೇತ್ರದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಸಂಸದ ಶ್ರೇಯಸ್ ಪಟೇಲ್, ಶಾಸಕರಾದ ಸ್ವರೂಪ್ ಪ್ರಕಾಶ್, ಕೆ.ಎಂ.ಶಿವಲಿಂಗೇಗೌಡ, ಸಿಮೆಂಟ್ ಮಂಜು, ಜಿಲ್ಲಾಧಿಕಾರಿ ಸಿ.ಸತ್ಯಭಾಮ, ಎಸ್ಪಿ ಮೊಹಮದ್ ಸುಜೀತಾ, ಜಿಪಂ ಸಿಇಒ ಪೂರ್ಣಿಮಾ ಮುಂತಾದವರಿದ್ದರು.