ವಿಡಿಯೋ: ಶ್ರೀ ಗುರು ದತ್ತಾತ್ರೇಯ, ಬಾಬಾಬುಡನ್ ದರ್ಗಾ ಬಳಿ ದತ್ತ ಜಯಂತಿಗೆ ಚಂಡಮಾರುತದ ಅಡ್ಡಿ: ಭಾರಿಗಾಳಿಗೆ ಹಾರಿಹೋದ ಹೋಮದ ಶೆಡ್ ಛಾವಣಿ

ಚಿಕ್ಕಮಗಳೂರು: ದತ್ತ ಜಯಂತಿಗೆ ಈ ಬಾರಿ ಮಳೆ ಮತ್ತು ಬಿರುಗಾಳಿ ಅಡ್ಡಿಯುಂಟುಮಾಡಿದೆ. ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಬಳಿ ಹೋಮ–ಹವನಕ್ಕೆ ನಿರ್ಮಿಸಿದ್ದ ಶೆಡ್ ಮೇಲ್ಛಾವಣಿಯೇ ಹಾರಿ ಹೋಗಿದೆ.

ದತ್ತ ಜಯಂತಿಗೆ ಚಾಲನೆ ದೊರೆತಿದ್ದು, ಚಿಕ್ಕಮಗಳೂರು ನಗರದಲ್ಲಿ ಶುಕ್ರವಾರ ಸಂಜೆ ಶೋಭಾಯಾತ್ರೆ ನಡೆಯಲಿದೆ. ಸಾವಿರಾರು ಹೆಚ್ಚು ಭಕ್ತರು ಸೇರುವ ನಿರೀಕ್ಷೆ ಇದೆ. ಶನಿವಾರ ಬೆಳಿಗ್ಗೆ ಗಿರಿ ಏರುವ ದತ್ತ ಭಕ್ತರು, ಗುಹೆಯೊಳಗೆ ಹೋಗಿ ದತ್ತ ಪಾದುಕೆಯ ದರ್ಶನ ಪಡೆಯಲಿದ್ದಾರೆ.

ಇದಕ್ಕಾಗಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿತ್ತು. ಆದರೆ, ಶುಕ್ರವಾರ ಬೀಸಿದ ಜೋರು ಗಾಳಿಗೆ ಹೋಮ ಶೆಡ್‌ ಮತ್ತು ಭಕ್ತರು ಸಾಗಲು ಹಾಕಿದ್ದ ಶೆಡ್‌ಗಳ ಮೇಲ್ಛಾವಣಿಗಳು ಹಾರಿ ಹೊಗಿವೆ. ತಗಡಿನ ಶೆಡ್‌ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ದುರಸ್ತಿಗೆ ಕಂದಾಯ ಇಲಾಖೆ ಸಿಬ್ಬಂದಿ ಪರದಾಡುತ್ತಿದ್ದಾರೆ. ದಟ್ಟವಾಗಿ ಮಂಜು ಕವಿದಿದ್ದು, ನಿರಂತರವಾಗಿ ಬಿರುಗಾಳಿಯೊಂದಿಗೆ ಮಳೆ ಸುರಿಯುತ್ತಿದೆ. ಇದರಿಂದ ದುರಸ್ತಿಗೂ ತೊಡಕಾಗಿದೆ.

ದತ್ತ ಜಯಂತಿಗಾಗಿ ಹಾಕಿದ್ದ ತೆಂಗಿನ ಗರಿಗಳ ಚಪ್ಪರ ಕೂಡ ಹಾರಿ ಹೋಗಿದೆ. ಚಳಿ ಮತ್ತು ಮಳೆಯ ನಡುವೆಯೇ ಪೊಲೀಸರು ಬಂದೋಬಸ್ತ್ ಕೈಗೊಂಡಿದ್ದಾರೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ ಅಮಟೆ ಅವರು ಲೋಕೋಪಯೋಗಿ ಇಲಾಖೆ, ಮೆಸ್ಕಾಂ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ತೆರಳಿ ಪರಿಶೀಲನೆ ನಡೆಸಿದರು. ದತ್ತ ಜಯಂತಿ ಸುಸೂತ್ರವಾಗಿ ನಡೆಸಲು ಕೈಗೊಳ್ಳಬೇಕಿರುವ ವ್ಯವಸ್ಥೆಗಳ ಕುರಿತು ವ್ಯವಸ್ಥಾಪನಾ ಸಮಿತಿಯೊಂದಿಗೆ ಚರ್ಚಿಸಿದರು.