ಹಾಸನ: ಸಕಲೇಶಪುರ ತಾಲೂಕಿನ ಆಚಂಗಿ ಬಳಿ ಹಳಿ ಮೇಲೆ ಗುಡ್ಡಕುಸಿತದಿಂದ ಹಾಸನ-ಮಂಗಳೂರು ನಡುವೆ ರೈಲು ಸಂಚಾರ ಬಂದ್ ಆದ್ದರಿಂದ ಸಾವಿರಾರು ಪ್ರಯಾಣಿಕರಿಗೆ ಆಗಿದ್ದ ಅನಾನುಕೂಲ ಸರಿಪಡಿಸಿ ಅವರ ಪ್ರಯಾಣಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ರೈಲ್ವೆ ಇಲಾಖೆ ಅಧಿಕಾರಿಗಳು ಇಡೀ ದಿನ ಬೆವರಿಳಿಸಿದರು.
ರಾತ್ರಿ ಭೂ ಕುಸಿತ ಸಂಭವಿಸಿರುವುದು ಗಮನಕ್ಕೆ ಬಂದ ತಕ್ಷಣ ಬೆಂಗಳೂರು-ಮಂಗಳೂರು ನಡುವೆ ಪ್ರಯಾಣ ಆರಂಭಿಸಿದ್ದ ಆರು ರೈಲುಗಳನ್ನು ಬೇರೆ ಬೇರೆ ನಿಲ್ದಾಣಗಳಲ್ಲಿ ನಿಲ್ಲಿಸಲಾಗಿತ್ತು.
ಮಧ್ಯರಾತ್ರಿಯಿಂದ ನಿಂತಲ್ಲೇ ನಿಂತಿದ್ದ ರೈಲುಗಳಲ್ಲಿ ಕುಳಿತು, ಮಲಗಿ ಸುಸ್ತಾದ ಪ್ರಯಾಣಿಕರ ಕಾಳಜಿ ವಹಿಸಿದ ರೈಲ್ವೆ ಅಧಿಕಾರಿಗಳು ಬೆಳಗ್ಗೆ ಚಹ, ಕಾಫಿ, ಬಿಸ್ಕತ್ತು, ಉಪಾಹಾರ, ಮಧ್ಯಾಹ್ನ ಊಟ, ಸಂಜೆ ಕಾಫಿ, ಸ್ನ್ಯಾಕ್ಸ್ ನೀಡಿ ಉಪಚರಿಸಿದರು.
ಸಂಜೆ ವೇಳೆಗೆ ಸುಮಾರು 1850 ಪ್ರಯಾಣಿಕರಿಗೆ 26 ಬಸ್‌ಗಳನ್ನು ವ್ಯವಸ್ಥೆ ಮಾಡಿ ಅವರನ್ನು ತಲುಪಬೇಕಿರುವ ಸ್ಥಳಕ್ಕೆ ಕಳುಹಿಸಿಕೊಡಲಾಯಿತು. ಪ್ರಯಾಣ ಮೊಟಕುಗೊಂಡ ಪ್ರಯಾಣಿಕರಿಗೆ ಟಿಕೆಟ್ ದರದ ಸಂಪೂರ್ಣ ಮೊತ್ತ ಮರುಪಾವತಿಸಲಾಯಿತು. ಅಧಿಕಾರಿಗಳು ಪ್ರಯಾಣಿಕರ ಸೌಕರ್ಯಕ್ಕೆ ಆದ್ಯತೆ ನೀಡುತ್ತಿದ್ದಾರೆ ಮತ್ತು ಸಾಮಾನ್ಯ ರೈಲು ಸೇವೆಗಳನ್ನು ಸಾಧ್ಯವಾದಷ್ಟು ವೇಗವಾಗಿ ಪುನಃಸ್ಥಾಪಿಸಲು ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದಾರೆ ಎಂದು ಮೈಸೂರು ಡಿ.ಆರ್.ಎಂ. ಶಿಲ್ಪಿ ಅಗರ್ವಾಲ್ ತಿಳಿಸಿದರು.
ಹದಿನೇಳು ಗಂಟೆಗಳಷ್ಟು ದಾರಿ ಮಧ್ಯೆ ಸಿಲುಕಿ ಪರದಾಡಿದ ಪ್ರಯಾಣಿಕರು ಕಡೆಗೂ ತಮ್ಮ ಗಮ್ಯದೆಡೆಗೆ ಪ್ರಯಾಣಿಸಲು ಸಾಧ್ಯವಾಗಿದ್ದಕ್ಕೆ ನಿಟ್ಟುಸಿರುಬಿಟ್ಟರು. ಅಲ್ಲದೇ ಆಹಾರ, ನೀರು ಕೊರತೆಯಾಗದಂತೆ ಕಾಳಜಿ ವಹಿಸಿದ ರೈಲ್ವೆ ಇಲಾಖೆ ಸಿಬ್ಬಂದಿ, ಅಧಿಕಾರಿಗಳಿಗೆ ಕೃತಜ್ಞತೆ ಹೇಳಿ ಬಸ್ ಏರಿದರು.