ಹಾಸನ ಬಸ್ ನಿಲ್ದಾಣಕ್ಕೆ ದಿಢೀರ್ ಭೇಟಿ ನೀಡಿದ ಪುಷ್ಪ ಅಮರ್‌ನಾಥ್; ಅವ್ಯವಸ್ಥೆ ಕಂಡು ಅಧಿಕಾರಿಗಳ ಮೇಲೆ ಗರಂ ಆದ ಗ್ಯಾರೆಂಟಿ ಸಮಿತಿ ಉಪಾಧ್ಯಕ್ಷೆ

ಹಾಸನ: ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಮೈಸೂರು ವಿಭಾಗದ ಉಪಾಧ್ಯಕ್ಷೆ ಪುಷ್ಪ ಅಮರ್‌ನಾಥ್ ಅವರು ಹಾಸನ ನಗರದ ಚನ್ನಪಟ್ಟಣ ಬಸ್ ನಿಲ್ದಾಣಕ್ಕೆ ದಿಢೀರ್ ಭೇಟಿ ನೀಡಿ, ಅಲ್ಲಿನ ಸೌಲಭ್ಯಗಳ ಸ್ಥಿತಿಗತಿ ಪರಿಶೀಲಿಸಿದರು. ಈ ವೇಳೆ ಹಲವು ಅವ್ಯವಸ್ಥೆಗಳು ಬೆಳಕಿಗೆ ಬಂದವು.

ಮಹಿಳಾ ಪ್ರಯಾಣಿಕರು ವಿಶ್ರಾಂತಿಗಾಗಿ ಬಳಸುವ ಕೊಠಡಿ ಬೀಗ ಹಾಕಿತ್ತು. ಪುಷ್ಪ ಅಮರ್‌ನಾಥ್ ಆಗಮಿಸಿದ್ದರಿಂದ ತಕ್ಷಣವೇ ಬೀಗ ತೆರೆಯಲಾಯಿತು. ಇದನ್ನು ಗಂಭೀರವಾಗಿ ಪರಿಗಣಿಸಿದ ಅವರು, KSRTC ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. “ಬಾಣಂತಿಯರು ಬಂದರೆ ಮಕ್ಕಳಿಗೆ ಎಲ್ಲಿ ಹಾಲುಣಿಸುತ್ತಾರೆ? ಈ ರೀತಿ ಬೇಜವಾಬ್ದಾರಿ ಪ್ರದರ್ಶಿಸಿದರೆ ನೀವು ಕೆಲಸದಲ್ಲಿ ಮುಂದುವರಿಯಲು ಸಾಧ್ಯವಿಲ್ಲ!” ಎಂದು ಅವರು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.

ಸಾರ್ವಜನಿಕರಿಗೆ ಸೌಲಭ್ಯ ಒದಗಿಸಬೇಕಾದ ಅಂಗಡಿಗಳು, ಬಸ್ ಸೇವೆಗಳು ಮತ್ತು ಶೌಚಾಲಯಗಳ ಸ್ಥಿತಿಯನ್ನು ಪರಿಶೀಲಿಸಿದ ಅವರು, ಪ್ರಯಾಣಿಕರ ಸಮಸ್ಯೆಗಳನ್ನು ನೇರವಾಗಿ ಆಲಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯರು, ಶೌಚಾಲಯ ಬಳಸಲು ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿದೆ ಎಂದು ದೂರು ನೀಡಿದರು. ಈ ಬಗ್ಗೆ ತಕ್ಷಣ ಸ್ಪಂದಿಸಿದ ಪುಷ್ಪ ಅಮರ್‌ನಾಥ್, “ಮೂರು ರೂಪಾಯಿಗಿಂತ ಹೆಚ್ಚು ಹಣ ವಸೂಲಿ ಮಾಡಬಾರದು. ಹೆಚ್ಚಿಗೆ ಹಣ ಪಡೆಯುವವರ ಲೈಸನ್ಸ್ ರದ್ದು ಮಾಡಿ!” ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ನಂತರ, ಸಾರ್ವಜನಿಕರ ಅನುಭವವನ್ನು ಹತ್ತಿರದಿಂದ ಅರಿಯಲು ಪುಷ್ಪ ಅಮರ್‌ನಾಥ್ ಬಸ್ ಹತ್ತಿ ಪ್ರಯಾಣಿಕರ ಜತೆ ಸಂವಾದ ನಡೆಸಿದರು. ಸಾರಿಗೆ ಸೇವೆಗಳಲ್ಲಿ ಸುಧಾರಣೆ ತರಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಅವರು, ಸಾರ್ವಜನಿಕರ ಹಿತದೃಷ್ಟಿಯಿಂದ ಯಾವುದೇ ಅಸಡ್ಡೆ ಸಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ಘಟನೆಯು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಬಸ್ ನಿಲ್ದಾಣದ ವ್ಯವಸ್ಥೆಯನ್ನು ಸುಧಾರಿಸಲು ಸಂಬಂಧಿತ ಅಧಿಕಾರಿಗಳ ಮೇಲೆ ಒತ್ತಡ ಹೆಚ್ಚಾಗಿದೆ.