ಕಾರಿನಲ್ಲೇ ಯುವತಿ ಮೇಲೆ ಅತ್ಯಾಚಾರ ಮಾಡಿದ ಪುರದಮ್ಮ ದೇವಾಲಯದ ಪೂಜಾರಿ ಬಂಧನ

ಅರಸೀಕೆರೆ ತಾಲ್ಲೂಕು ಅಣ್ಣಾಯಕನ‌ ಹಳ್ಳಿ ಗ್ರಾಮದ ಆರೋಪಿ|ಈತ ಗ್ರಾಮ ಪಂಚಾಯತಿ ಸದಸ್ಯ

ಹಾಸನ: ಜಾತಕದ ದೋಷ ನಿವಾರಿಸುವುದಾಗಿ ನಂಬಿಸಿ ಪರಿಚಿತ ಯುವತಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇರೆಗೆ ಪುರದಮ್ಮ ದೇವಾಲಯದ ಪೂಜಾರಿ ದಯಾನಂದ್ ಬೆಂಗಳೂರಿನ ಬಾಗಲಗುಂಟೆ ಠಾಣೆ ಪೊಲೀಸರಿಂದ ಬಂಧಿತನಾಗಿದ್ದಾನೆ.

ಕೆಲ ದಿನಗಳ ಹಿಂದೆ ಬಾಗಲಗುಂಟೆ ಸಮೀಪದ ನೆಲೆಸಿರುವ ಸಂತ್ರ ಸ್ತೆಯನ್ನು ಲೈಂಗಿಕವಾಗಿ ಪೂಜಾರಿ ಶೋಷಿಸಿದ್ದ. ಈ ಬಗ್ಗೆ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಅತ್ಯಾಚಾರ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಶೋಕಿಲಾಲ ಪೂಜಾರಿ: ಪುರದಮ್ಮ
ದೇವಾಲಯವು ಶಕ್ತಿ ದೇವತೆಯಾಗಿ ಜನ ಮಾಸದಲ್ಲಿ ನೆಲೆಸಿದೆ. ಹಲವು ವರ್ಷಗಳಿಂದ ಈ ದೇವಾಲಯದಲ್ಲಿ ದಯಾನಂದ್ ಪೂಜಾರಿಯಾಗಿದ್ದು, ದೇವರ ಹೆಸರು ಬಳಸಿಕೊಂಡು ಮಾಟ ಮಂತ್ರ ಹಾಗೂ ವಶೀಕರಣ ಹೀಗೆ ಅನಾಚಾರ ಆಚರಣೆಗಳಲ್ಲಿ ಆತ ನಿರತನಾಗಿದ್ದ ಎಂಬ ಆರೋಪಗಳು ಕೇಳಿಬಂದಿವೆ.

ದೇವಾಲಯದ ಹೆಸರಿನಲ್ಲಿ ಸಂಪಾದಿಸಿದ ಹಣದಲ್ಲಿ ದಯಾನಂದ್ ವೈಭೋಗದ ಜೀವನ ಸಾಗಿಸುತ್ತಿದ್ದ. ಮೈ ತುಂಬ ಚಿನ್ನಾಭರಣ ಧರಿಸಿ ಐಷಾರಾಮಿ ಕಾರುಗಳಲ್ಲೇ ಓಡಾಡುತ್ತಿದ್ದ ಆತ, ತನ್ನ ಶ್ರೀಮಂತ ಜೀವನ ಶೈಲಿಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಲ ಗಳಲ್ಲಿ ಹಂಚಿಕೊಳ್ಳುತ್ತಿದ್ದ, ಆತನಿಗೆ ಶೋಕಿ ಖಯಾಲಿ ವಿಪರೀತ ಇತ್ತು ಎಂದು ಪೊಲೀಸರು ಹೇಳಿದ್ದಾರೆ.

ಇನ್ನು ಸಂತ್ರಸ್ತೆ ಅರಸಿಕೆರೆ ತಾಲೂಕಿನವರಾಗಿದ್ದು, ನಗರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡು ಬಾಗಲಗುಂಟೆ ಸಮೀಪದ ಪಿಜಿಯಲ್ಲಿ ನೆಲೆಸಿದ್ದಾಳೆ. ಪುರದಮ್ಮ ದೇವರ ಭಕ್ತಿಯಾಗಿರುವ ಸಂತ್ರಸ್ತೆ, ದೇವಾಲಯಕ್ಕೆ ಭೇಟಿ ನೀಡಿದ್ದಾಗ ಪೂಜಾರಿ ದಯಾನಂದ್ ಪರಿಚಯವಾಗಿತ್ತು. ಕೆಲ ತಿಂಗಳ ಹಿಂದೆ ದೇಗುಲಕ್ಕೆ ಹೋಗಿದ್ದಾಗ ಆಕೆಯ ಹಸ್ತರೇಖೆ ನೋಡಿ ನಿನ್ನ ಜಾತ ಕದಲ್ಲಿ ದೋಷವಿದೆ. ಈ ದೋಷ ನಿವಾರಣೆಗೆ ವಿಶೇಷ ಪೂಜೆ ಮಾಡಬೇಕಿದೆ. ಇದಕ್ಕೆ ಹಣ ವ್ಯಯವಾಗಲಿದೆ ಎಂದು ಸಂತ್ರಸ್ತೆಗೆ ಆತ ಹೇಳಿದ್ದ.

ಈ ಮಾತಿಗೆ ಒಪ್ಪಿದ ಆಕೆ, ₹10 ಸಾವಿರ ಕೊಟ್ಟಿದ್ದಳು. ಆಗ ನಿಂಬೆಹಣ್ಣು ಮಂತ್ರಿಸಿ ಪ್ರತಿದಿನ ರಾತ್ರಿ ಮಲಗುವಾಗ ತಲೆದಿಂಬಿನಡಿಯಿಟ್ಟು ಮಲಗುವಂತೆ ಸಂತ್ರಸ್ತೆಗೆ ಆರೋಪಿ ಹೇಳಿದ್ದ. ಬಳಿಕ ಮೇ 24ರಂದು ಸಂತ್ರಸ್ತೆಗೆ ಕರೆ ಮಾಡಿದ್ದ ದಯಾನಂದ್, ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಪರಿಚಿತರ ಮನೆಯಲ್ಲಿ ಪುರದಮ್ಮ ದೇವಿಯ ಪೂಜೆಗೆ ಆಹ್ವಾನಿಸಿದ್ದ. ಆ ಪೂಜೆಗೆ ಬಂದರೆ ಮಂತ್ರಿಸಿದ ತಾಳಿ ಕೊಡುವುದಾಗಿ ಆರೋಪಿ ಆಮಿಷವೊಡ್ಡಿದ್ದ.

ಕಾರಿನಲ್ಲೇ ಯುವತಿ ಮೇಲೆ ಅತ್ಯಾಚಾರ:
ಸಂತ್ರಸ್ತೆಯ ಪಿಜಿ ಬಳಿ ಹೋಗಿ ಆಕೆಯನ್ನು ಕಾರಿನಲ್ಲಿ ಕೂರಿಸಿಕೊಂಡು ದಯಾನಂದ್‌ ತೆರಳಿದ್ದಾನೆ. ಆದರೆ ಪೂಜೆಗೆ ಕರೆದೊಯ್ಯದೆ ಮೈಸೂರು ರಸ್ತೆಗೆ ಕರೆದುಕೊಂಡು ಹೋದ ಆತ, ದಾರಿ ಮಧ್ಯೆ ಕಾರಿನಲ್ಲೇ ಆಕೆ ಮೇಲೆ ಅತ್ಯಾಚಾರ ಎಸಗಿದ್ದಾನೆ. ಈ ಕೃತ್ಯದ ಬಗ್ಗೆ ಯಾರಿಗಾದರೂ ಬಾಯ್ಬಿಟ್ಟರೆ ನಿನ್ನ ಮಾರ್ಫ್ ಮಾಡಿದ ಫೋಟೋಗಳನ್ನು ಜಾಲತಾಣಗಳಲ್ಲಿ ಹರಿಬಿಟ್ಟು ಮರ್ಯಾದೆ ಕಳೆಯು ವುದಾಗಿ ದಯಾನಂದ್ ಬೆದರಿಸಿದ್ದ. ಬಳಿಕ ಸಂತ್ರಸ್ತೆಯನ್ನು ಬ್ಲ್ಯಾಕ್‌ಮೇಲ್ ಮಾಡಿ 40 ಸಾವಿರ ಸುಲಿಗೆ ಮಾಡಿದ ಆರೋಪಿ, ಆಕೆ ಕೆಲಸ ಮಾಡುವ ಕಂಪನಿ ಬಳಿಗೆ ತೆರಳಿ ಕೂಡ ಬೆದರಿಸಿದ್ದಾನೆ.

ಆಗ ಮತ್ತೆ ಆಕೆಯನ್ನು ಹೋಟೆಲ್‌ಗೆ ಕರೆದೊಯ್ದು ದಯಾನಂದ್ ಲೈಂಗಿಕವಾಗಿ ಶೋಷಣೆ ಮಾಡಿದ್ದ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಈ ಲೈಂಗಿಕ ದೌರ್ಜನ್ಯ ಸಹಿಸಲಾರದೆ ಕೊನೆಗೆ ಬಾಗಲಗುಂಟೆ ಠಾಣೆ ಪೊಲೀಸರಿಗೆ ಸಂತ್ರಸ್ತೆ ದೂರು ನೀಡಿದ್ದಳು. ಈ ದೂರನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಮೊಬೈಲ್ ಕರೆಗಳ ಮಾಹಿತಿ ಆಧರಿಸಿ ಆರೋಪಿಯನ್ನು ಬಂಧಿಸಿದ್ದಾರೆ.