19 ಲಕ್ಷ ಭಕ್ತರಿಂದ ದರ್ಶನ, ಟಿಕೆಟ್, ಲಾಡು ಮಾರಾಟದಿಂದಲೇ 9 ಕೋಟಿ ರೂ. ಸಂಗ್ರಹ!; ಇತಿಹಾಸ ಬರೆದ ಹಾಸನಾಂಬ ಉತ್ಸವ ಸಂಪನ್ನ

ಹಾಸನ: ಶಕ್ತಿದೇವತೆ, ಹಾಸನದ ಅಧಿದೇವತೆ ಹಾಸನಾಂಬೆ ದೇವಿ ದೇವಾಲಯದ ಈ ಬಾರಿಯ ಸಾರ್ವಜನಿಕ ದರ್ಶನ ಮುಂಜಾನೆ 6.30ಕ್ಕೆ ಅಂತ್ಯಗೊಂಡಿತು.

ಅಹೋರಾತ್ರಿ ಸಾವಿರಾರು ಭಕ್ತರು ದರ್ಶನ ಪಡೆದರೂ ಬಾಗಿಲು ಹಾಕುವ ಕಡೆ ಗಳಿಗೆಯಲ್ಲಿ ದೇವಿ ದರ್ಶನಕ್ಕೆ ಕಾದು ನಿಂತಿದ್ದರು. ಆದರೆ ನಿಯಮಾನುಸಾರ ಅರ್ಚಕರು ಸಾರ್ವಜನಿಕ ದರ್ಶನ ಅಂತ್ಯಗೊಳಿಸಿದರು. ಇದರಿಂದ ಹಲವರು ದರ್ಶನ ಸಾಧ್ಯವಾಗದೆ ನಿರಾಸೆ ಅನುಭವಿಸಿದರು.

ಇಂದು ಅರ್ಚಕರು ದೇವಿಯ ಒಡವೆ, ವಸ್ತ್ರಗಳನ್ನು ತೆಗೆದಿರಿಸಿ ಈ ವರ್ಷದ ಅಂತಿಮ ಪೂಜೆ, ನೈವೇದ್ಯ ನಡೆಸಲಿದ್ದಾರೆ. ಮಧ್ಯಾಹ್ನ 12 ಗಂಟೆ ನಂತರ ವಿಶ್ವರೂಪ ದರ್ಶನದ ಬಳಿಕ ಶಾಸ್ತ್ರೋಕ್ತವಾಗಿ ಗರ್ಭಗುಡಿ ಬಾಗಿಲು ಮುಚ್ಚಲಿದೆ.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ, ಸ್ಥಳೀಯ ಶಾಸಕ ಸ್ವರೂಪ್‌ಪ್ರಕಾಶ್, ಜಿಲ್ಲಾಧಿಕಾರಿ ಸಿ.ಸತ್ಯಭಾಮ, ಎಸ್ಪಿ‌ ಮಹಮದ್ ಸುಜಿತಾ, ಎಸಿ ಮಾರುತಿ ಸಮ್ಮುಖದಲ್ಲಿ ಅರ್ಚಕರು ನಂದಾದೀಪ ಹಚ್ಚಿ ಗರ್ಭಗುಡಿ ಬಾಗಿಲು ಮುಚ್ಚಿ ಬೀಗಮುದ್ರೆ ಹಾಕಲಿದ್ದಾರೆ.

ಈ ಬಾರಿ ಅ.24 ರಂದು ಹಾಸನಾಂಬೆ ದೇವಾಲಯದ ಗರ್ಭಗುಡಿ ಬಾಗಿಲು ತೆರೆಯಲಾಗಿದ್ದು ಒಟ್ಟು 19 ಲಕ್ಷಕ್ಕಿಂತ ಹೆಚ್ಚು ಭಕ್ತರು ದೇವಿ ದರ್ಶನ ಪಡೆದಿದ್ದಾರೆ. 1000 ರೂ., 300 ರೂ. ಲಾಡು ಪ್ರಸಾದ ಹಾಗೂ ದೇವಿಯ ಸೀರೆ ಮಾರಾಟದಿಂದ 9 ಕೋಟಿ ರೂ.ಗೂ ಅಧಿಕ ಆದಾಯ ಸಂಗ್ರಹವಾಗಿದ್ದು, ಈ ಬಾರಿಯ ಜಾತ್ರಾ ಮಹೋತ್ಸವ ಇತಿಹಾಸ ಬರೆದಿದೆ.