ಮಹಿಳಾ ಸಬ್ ಇನ್ಸ್ ಪೆಕ್ಟರ್ ಗೆ ಕಚೇರಿಯಲ್ಲೇ ಸೀಮಂತ ನೆರವೇರಿಸಿದ ಸಹೋದ್ಯೋಗಿಗಳು; ಉಡಿ ತುಂಬಿ ಹಾರೈಸಿದ ಪೊಲೀಸರು

ಹಾಸನ: ಸದಾ ಕರ್ತವ್ಯದಲ್ಲೇ ಮುಳುಗಿರುವ  ನಗರದ ಪೊಲೀಸ್ ಗುಪ್ತವಾರ್ತೆ  ವಿಭಾಗದ ಕಚೇರಿಯಲ್ಲಿ ಗುರುವಾರ ಸೀಮಂತ ಸಂಭ್ರಮ, ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಪಿಎಸ್ಐ ಉಷಾರಾಣಿ ಅವರ ಸೀಮಂತವನ್ನು ಸಹೋದ್ಯೋಗಿಗಳು ಒಗ್ಗೂಡಿ ನೆರವೇರಿಸಿದರು.

ನಗರದ ರಾಜ್ಯ ಗುಪ್ತವಾರ್ತೆ ಘಟಕದ ಸಿಬ್ಬಂದಿ ಸದಾ ವಿವಿಧ ಚಟುವಟಿಕೆಗಳ ಮುಂಗಡ ಮಾಹಿತಿ, ರಾಜಕೀಯ ಚಟುವಟಿಕೆ, ಪ್ರತಿಭಟನೆ ಮತ್ತಿತರ ಮಾಹಿತಿ ಸಂಗ್ರಹಣೆಯಲ್ಲಿ ಬಿಜಿಯಾಗಿರುತ್ತಾರೆ. ಆದರೆ ಅದೆಲ್ಲದರ ನಡುವೆ ಬಿಡುವು ಪಡೆದು ಘಟಕದ ಪ್ರಭಾರ ಅಧಿಕಾರಿ ಯುವರಾಜ್ ನೇತೃತ್ವದಲ್ಲಿ ಸೀಮಂತ ಕಾರ್ಯಕ್ರಮ ನೆರವೇರಿಸಿದರು.

ತಮ್ಮ ಘಟಕದ ಪಿಎಸ್ಐ ಉಷಾರಾಣಿಯವರಿಗೆ ಸಿಹಿ ಸೇರಿದಂತೆ ನಾನಾ ಬಗೆಯ ಉಡುಗೊರೆ ಯೊಂದಿಗೆ ಪಿಎಸ್ಐ ಉಷಾರಾಣಿ ಮಡಿಲು ತುಂಬಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಿಬ್ಬಂದಿ ನಾಗರಾಜ್, ಸೀಮಂತ ಶಾಸ್ತ್ರ ಒಂದು ಭಾವನಾತ್ಮಕ ಸಂಬಂಧವನ್ನು  ಹೊಂದಿದೆ. ತನ್ನ ಚೊಚ್ಚಲ ಕರಳ ಕುಡಿಯ ಗರ್ಭದಲ್ಲಿ ಹೊತ್ತ ಒಂದು ಕುಟುಂಬ ಪುಳಕಿತರಾಗುವ ಸಂದರ್ಭ ಹೆರಿಗೆ ಸುಖಕರಾವಾಗಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಗುಪ್ತಚರ ಘಟಕದ ಸಿಬ್ಬಂದಿ, ಪಿಎಸ್ಐ ಉಷಾರಾಣಿ ಪತಿ, ಗಂಡಸಿ ಪೊಲೀಸ್ ಠಾಣೆ ಪಿಎಸ್ಐ ದಿಲೀಪ್, ಬರಹಗಾರ ನಿಂಗರಾಜು ಮತ್ತು ಸಿಬ್ಬಂದಿ ಹಾಜರಿದ್ದರು.