ಹಾಸನ: ಶ್ರೀ ಬಸವೇಶ್ವರ ವಿಶೇಷ ಜಯಂತ್ಯುತ್ಸವದ ಅಂಗವಾಗಿ ಜಗಜ್ಯೋತಿ ಬಸವೇಶ್ವರ ಆಚರಣಾ ಸಮಿತಿ ಸಂಯುಕ್ತಾಶ್ರಯದಲ್ಲಿ ಶನಿವಾರ ಬೆಳಿಗ್ಗೆ ನಡೆದ ವಿವಿಧ ಸಾಂಸ್ಕೃತಿಕ ಕಲಾತಂಡಗಳು ಹಾಗೂ ಸಾವಿರಾರು ಮಂದಿಯ ಭಾಗಿಯೊಂದಿಗೆ ನಡೆದ ಮೆರವಣಿಗೆ ನೋಡುಗರ ಗಮನ ಸೆಳೆಯಿತು.
ಆರಂಭದಲ್ಲಿ ನಗರದ ಅರಳೇಪೇಟೆ ರಸ್ತೆಯ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಜವೇನಹಳ್ಳಿ ಮಠದ ಶ್ರೀ ಸಂಗಮೇಶ್ವರ ಸ್ವಾಮೀಜಿ, ಸೀಗೆನಾಡು ಮಳೆಮಲ್ಲೇಶ್ವರ ಬೆಟ್ಟದ ಶ್ರೀ ನಂದೀಶ್ವರ ಶಿವಾಚಾರ್ಯ ಮಹಾಸ್ವಾಮೀಜಿ, ತಣ್ಣೀರುಹಳ್ಳ ಮಠದ ಶ್ರೀ ವಿಜಯಕುಮಾರ ಸ್ವಾಮೀಜಿ, ಯಸಳೂರು ತೆಂಕಲಗೂಡು ಬೃಹನ್ ಮಠದ ಶ್ರೀ ಚನ್ನಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ ಅವರು ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ನಂತರ ಬೆಳ್ಳಿ ರಥದಲ್ಲಿ ಇರಿಸಿದ್ದ ಶ್ರೀ ಬಸವೇಶ್ವರರ ಭಾವಚಿತ್ರಕ್ಕೆ ಸ್ವಾಮೀಜಿಗಳು ಹಾಗೂ ಸಮಾಜದ ಮುಖಂಡರು ಸಾಮೂಹಿಕವಾಗಿ ಪುಷ್ಪಾರ್ಚನೆ ನೆರವೇರಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಈ ವೇಳೆ ಮೆರವಣಿಗೆಯಲ್ಲಿ ನಾದಸ್ವರ, ನಂದಿಧ್ವಜ, ಚಂಡೆವಾಧ್ಯ, ವೀರಗಾಸೆ, ಗೊಂಬೆ ಬಳಗ, ಡಿಜೆ, ನಾಸಿಕ್ ಡೋಲ್, ಕೀಲುಕುದುರೆ, ಶ್ರೀಕೃಷ್ಣ, ರುಕ್ಮಿಣಿ , ರಾಧೆಯರ ಕುಣಿತ ಸೇರಿದಂತೆ ವಿವಿಧ ಕಲಾ ತಂಡಗಳು ಭಾಗವಹಿಸಿ ಮೆರಗು ನೀಡಿದವು. ಮೆರವಣಿಗೆ ನಂತರ ಶ್ರೀ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಭಕ್ತಾಧಿಗಳಿಗೆ ಅನ್ನದಾಸೋಹ ನೆರವೇರಿಸಿದರು.
ಈ ವೇಳೆ ಮಾತನಾಡಿದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಬಿ.ಆರ್.ಗುರುದೇವ್, ೧೨ನೇ ಶತಮಾನದ ಸಾಮಾಜಿಕ ಹರಿಕಾರರಾದ ವಿಶ್ವಗುರು ಶ್ರೀ ಬಸವಣ್ಣ ಅವರು ಹಾಕಿಕೊಟ್ಟ ಆಚಾರ-ವಿಚಾರಗಳಲ್ಲಿ ಬೇಧ ಭಾವ ಮಾಡದಂತೆ ಅವರ ಜಯಂತ್ಯುತ್ಸವವನ್ನು ಅದ್ಧೂರಿಯಾಗಿ ಆಚರಿಸುತ್ತಿದ್ದೇವೆ. ವಿವಿಧ ಮಠದ ಸ್ವಾಮೀಜಿಗಳ ದಿವ್ಯ ಸಾನ್ನಿಧ್ಯದಲ್ಲಿ ಮೆರವಣಿಗೆ ಅದ್ಧೂರಿಯಾಗಿ ಜರುಗಿದೆ. ಮೆರವಣಿಗೆಯಲ್ಲಿ ಪ್ರಮುಖವಾಗಿ ಶ್ರೀ ಬಸವೇಶ್ವರರ ಭಾವಚಿತ್ರ ಹಾಗೂ ಶಿವಶರಣರ ಭಾವಚಿತ್ರ ಗಮನ ಸೆಳೆದಿವೆ ಎಂದು ಹೇಳಿದರು.
ವೀರಶೈವ ಲಿಂಗಾಯಿತ ಸಂಘದ ನಿರ್ದೇಶಕ ಶೋಭನ್ ಬಾಬು ಮಾತನಾಡಿ, ಬಸವ ಜಯಂತಿ ಪ್ರಯುಕ್ತ ವಿಶೇಷವಾಗಿ ಜಯಂತ್ಯುತ್ಸವ ಆಚರಣೆಯನ್ನು ಅದ್ಧೂರಿಯಾಗಿ ಮಾಡಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ವೀರಶೈವ ಲಿಂಗಾಯತ ಸಮಾಜದವರು ಸೇರಿದಂತೆ ಜಾತಿ ಬೇಧ ಇಲ್ಲದೆ ಎಲ್ಲರೂ ಭಾಗವಹಿಸಿದ್ದಾರೆ. ಈ ಅದ್ಧೂರಿ ಕಾರ್ಯಕ್ರಮ ಜಾತ್ರೆಯೋಪಾದಿಯಲ್ಲಿ ನಡೆದಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಮೆರವಣಿಗೆಯಲ್ಲಿ ವೀರಶೈವ ಲಿಂಗಾಯತ ಸಮಾಜದ ಮುಖಂಡರಾದ ಸಂಗಂ, ಹೇಮೇಶ್, ಸಂಘದ ಉಪಾಧ್ಯಕ್ಷ ಕಿರಣ್ ಕುಮಾರ್, ಮಾಜಿ ನಿರ್ದೇಶಕ ಲೋಕೇಶ್, ಮುಖಂಡರಾದ ಹೇಮಂತ್, ರೋಹಿತ್, ವಸಂತಕುಮಾರ್, ಹೆಚ್.ಎನ್. ನಾಗೇಶ್, ಕೀರ್ತಿಕುಮಾರ್, ಯು.ಎಸ್. ಬಸವರಾಜು, ದೊಡ್ಡೇಗೌಡ ಸೇರಿದಂತೆ ನೂರಾರು ಮಂದಿ ಭಾಗಿಯಾಗಿದ್ದರು.