ಅಪಸ್ವರ ಇಲ್ಲದೇ ಚುನಾವಣೆ ಎದುರಿಸುತ್ತೇವೆ; ಪ್ರೀತಂಗೌಡ ಅವರೂ ಪ್ರಚಾರಕ್ಕೆ ಬರಲೇಬೇಕು; ಸಿ.ಟಿ.ರವಿ

ಎಲ್ಲರ ಅಭಿಪ್ರಾಯ ಮೈತ್ರಿ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಗೆಲ್ಲಬೇಕು ಎಂಬುದಾಗಿದೆ

ಹಾಸನ: ರಾಜ್ಯಮಟ್ಟದ ಸಮನ್ವಯ ಸಭೆಯಲ್ಲಿ ಪ್ರೀತಂಗೌಡ ಅವರು ಭಾಗಿಯಾಗಿದ್ದಾರೆ. ಅವರು ಚುನಾವಣೆ ಪ್ರಚಾರಕ್ಕೆ ಬರಲೇಬೇಕು ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು.

ಹಾಸನದ ಖಾಸಗಿ ಹೋಟೆಲ್ ನಲ್ಲಿ ಇಂದು ಆಯೋಜಿಸಿದ್ದ ಮೊದಲ ಜಿಲ್ಲಾ ಮಟ್ಟದ ಬಿಜೆಪಿ-ಜೆಡಿಎಸ್ ಸಮನ್ವಯ ಸಭೆಯ ಬಳಿಕ ಮಾತನಾಡಿದರು.

ರಾಜ್ಯದಲ್ಲಿ 28 ಕ್ಕೆ 28 ಕ್ಷೇತ್ರಗಳನ್ನು ಗೆಲ್ಲುತ್ತೇವೆ. ಪ್ರೀತಂಗೌಡ ಅವರು ನಮ್ಮ ನಾಯಕ, ಅವರಿಗೆ ಚಾಮರಾಜನಗರ, ಮೈಸೂರು ಲೋಕಸಭಾ ಕ್ಷೇತ್ರದ ಜವಾಬ್ದಾರಿ ಕೊಟ್ಟಿದ್ದಾರೆ ಎಂದರು.

ಲೋಕಸಭಾ ಗೆಲುವಿನ ದೃಷ್ಟಿಯಿಂದ ಸಮನ್ವಯ ಸಭೆ ಆಯೋಜನೆ ಮಾಡಿದ್ದೆವು. ಇಪ್ಪತ್ತುಕ್ಕೂ ಹೆಚ್ಚು ನಾಯಕರು ಸಲಹೆ ಕೊಟ್ಟಿದ್ದಾರೆ. ಅವರೆಲ್ಲರ ಅಭಿಪ್ರಾಯ ಮೈತ್ರಿ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಗೆಲ್ಲಬೇಕು ಎಂಬುದಾಗಿದೆ ಎಂದರು.

ಯಾವುದೇ ಅಪಸ್ವರ ಇಲ್ಲದೆ ಚುನಾವಣೆ ಎದುರಿಸುತ್ತೇವೆ. ಬೂತ್ ಮಟ್ಟದಲ್ಲಿ ಕೋಆರ್ಡಿನೇಷನ್ ಕಮಿಟಿ ಮಾಡುತ್ತೇವೆ. ನಮಗೆ ವಿಶ್ವಾಸವಿದೆ, ಕಾಂಗ್ರೆಸ್ ಎಷ್ಟೇ ಹಣ ಬಲ ಆಧರಿಸಿ ಅಧಿಕಾರ ದುರುಪಯೋಗ ಪಡಿಸಿಕೊಂಡರೂ ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಎದುರಿಸಲು ಸಮರ್ಥರಿದ್ದಾರೆ.

ಪ್ರಧಾನಿ ನರೇಂದ್ರಮೋದಿ, ದೇವೇಗೌಡರು ಮೈತ್ರಿ ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ ಯಡಿಯೂರಪ್ಪ, ದೇವೇಗೌಡರು ಸಮನ್ವಯ ಸಭೆ ಮಾಡಿದ್ದಾರೆ. ಕೆಲವರು ತಕ್ಷಣಕ್ಕೆ ಜೋಡಿಸಿಕೊಂಡಿದ್ದಾರೆ, ಕೆಲವರು ಸಭೆಯಾದ ಮೇಲೆ ಜೋಡಿಸಿಕೊಂಡಿದ್ದಾರೆ. ಇನ್ನೂ ಕೆಲವರು ಮುಂದೆ ಜೋಡಿಸಿಕೊಳ್ಳುತ್ತಾರೆ ಎಂದರು.