ಹಾಸನ: ನಮ್ಮ ಸರ್ಕಾರ ಹಗರಣ ಮಾಡಿದೆ ಎಂದು ಬಿಜೆಪಿ ಮತ್ತು ಜೆಡಿಎಸ್ ನಡೆಸುತ್ತಿರುವ ಪಾದಯಾತ್ರೆ ಹಾಸ್ಯಾಸ್ಪದ ಹಾಗೂ ಸತ್ಯಕ್ಕೆ ದೂರವಾದುದು ಎಂದು ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಡಿ. ತಾರಾ ಚಂದನ್ ಹೇಳಿದರು.
ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಯಾವುದೇ ಸತ್ಯಾಂಶ ಇಲ್ಲದ ಮುಡಾ ಪ್ರಕರಣ ಮುಂದಿಟ್ಟು ಪಾದಯಾತ್ರೆ ಮಾಡುತ್ತಿರುವ ವಿಪಕ್ಷಗಳ ನಡೆ ಖಂಡಿಸಿ ಮತ್ತು ಅವರ ಅವಧಿಯಲ್ಲಿ ಆಗಿರುವ ಹಗರಣ ಬಿಚ್ಚಿಡುವ ಉದ್ದೇಶದಿಂದಲೇ ಆಗಸ್ಟ್ ೯ ರಂದು ಮೈಸೂರಿನಲ್ಲಿ ಕಾಂಗ್ರೆಸ್ ಪಕ್ಷದಿಂದ ಜನಾಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಜಿಲ್ಲೆಯಿಂದಲೂ ೫-೧೦ ಸಾವಿರ ಮಂದಿ ಭಾಗವಹಿಸುತ್ತೇವೆ ಎಂದರು.
ಯಾವುದೇ ಸಂಬAಧ ಇಲ್ಲದೇ ಇದ್ದರೂ, ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಅವರನ್ನು ಸಿಲುಕಿಸಿ ಅವರನ್ನು ತೇಜೋವಧೆ ಮಾಡುತ್ತಿರುವ ಮಿತ್ರಪಕ್ಷಗಳ ನಡೆ ಸರಿಯಿಲ್ಲ ಎಂದರು.
ಅವರ ಪಾದಯಾತ್ರೆ ಅರ್ಥ ಹೀನ. ಅಬ್ರಹಾಂ ಎಂಬ ವ್ಯಕ್ತಿಯ ಆರೋಪ ಸತ್ಯಕ್ಕೆ ದೂರವಾಗಿದೆ. ಆದರೂ ರಾಜ್ಯಪಾಲರು ಶೋಕಾಸ್ ನೋಟಿಸ್ ಕೊಟ್ಟಿರುವುದು ಸರಿಯಲ್ಲ ಎಂದರು.
ವಿಪಕ್ಷಗಳು ರಾಜ್ಯಪಾಲರನ್ನು ದುರ್ಬಳಕೆ ಮಾಡಿಕೊಂಡು ಮಾಡುತ್ತಿರುವ ಹೋರಾಟಕ್ಕೆ ನಮ್ಮ ವಿರೋಧ ಇದೆ. ಹಾಲಿ ಬಹಳಷ್ಟು ಪ್ರಕರಣ ಲೋಕಾಯುಕ್ತದಲ್ಲಿ ವಿಚಾರಣೆಗೆ ಪೆಂಡಿAಗ್ ಇದ್ದರೂ, ಅವುಗಳನ್ನು ವಿಚಾರಣೆಗೆ ಒಳಪಡಿಸದೆ ಸಿದ್ದರಾಮಯ್ಯ ಅವರನ್ನೇ ಗುರಿಯಾಗಿಟ್ಟು ಕೊಂಡು ಪಾದಯಾತ್ರೆ ಮಾಡುತ್ತಿರುವುದು ಹಾಸ್ಯಾಸ್ಪದ ಎಂದರು.
ಭ್ರಷ್ಟ ಜನಾರ್ಧನ ರೆಡ್ಡಿ, ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣ ವಿರುದ್ಧ ಲೋಕಾಯುಕ್ತದಲ್ಲಿ ದೂರು ನೀಡಿ ವರ್ಷಗಳೇ ಕಳೆದಿದ್ದರೂ, ರಾಜ್ಯಪಾಲರು ಅವರಿಗೆ ಇದುವರೆಗೆ ಶೋಕಾಸ್ ನೋಟಿಸ್ ಕೊಟ್ಟಿಲ್ಲ. ಏಕೆ ಇಲಾಖೆ ವಿಚಾರಣೆಗೆ ಒಳಪಡಿಸಿಲ್ಲ, ಇದು ಗಂಭೀರ ಆರೋಪ ಅಲ್ಲವೇ ಎಂದು ಪ್ರಶ್ನಿಸಿದರು.
ನಾಡಿನ ಜನಸಾಮಾನ್ಯರಿಗಾಗಿ ಉತ್ತಮ ಕೆಲಸ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು ಬಿಜೆಪಿ ಹಾಗೂ ಅದರ ಮಿತ್ರ ಪಕ್ಷ ಜೆಡಿಎಸ್ ಅವರು ಕುತಂತ್ರ ಮಾಡಿದ್ದಾರೆ. ಇದಕ್ಕೆ ರಾಜ್ಯಪಾಲರು ಸ್ಪಂದಿಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಕೇಳಿದ ಅವರು, ತಕ್ಷಣವೇ ನೋಟಿಸ್ ಹಿಂಪಡೆಯಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸುವ ಎಚ್ಚರಿಕೆ ನೀಡಿದರು.
ನಾಳೆ ಮೈಸೂರಿನಲ್ಲಿ ಭ್ರಷ್ಟ ಬಿಜೆಪಿ-ಜೆಡಿಎಸ್ ಪಾದಯಾತ್ರೆ ವಿರುದ್ಧ ಹಮ್ಮಿಕೊಂಡಿರುವ ಬೃಹತ್ ಜನಾಂದೋಲನ ಕಾರ್ಯಕ್ರಮಕ್ಕೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿ ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಘಟಕದ ಉಪಾಧ್ಯಕ್ಷೆ ರಹೀಮಾ, ಬ್ಲಾಕ್ ಅಧ್ಯಕ್ಷೆ ವಸಂತ ಕುಮಾರಿ, ಜಿಲ್ಲಾ ಸೋಷಿಯಲ್ ಮೀಡಿಯಾ ಮೇಲ್ವಿಚಾರಕಿ ಜಮೀಲಾ ಇದ್ದರು.