ಸಕಲೇಶಪುರ : ಜನಾಂಗೀಯ ಅಸಮಾನತೆ ಉತ್ತುಂಗದಲ್ಲಿದ್ದ ಸಂದರ್ಭದಲ್ಲಿ ಪವಿತ್ರ ಕಾಬಾಕ್ಕೆ ತನ್ನ ಹೆಗಲುಕೊಟ್ಟು ಕಪ್ಪು ವರ್ಣದ ವ್ಯಕ್ತಿಯನ್ನು ಹತ್ತಿಸಿ ಜಗತ್ತಿಗೆ ಸಮಾನತೆಯ ಸಂದೇಶವನ್ನು ಸಾರಿ ಪ್ರವಾದಿ ಮಹಮ್ಮದ್ ಮಾದರಿಯಾದರು ಎಂದು ಆನೆಮಹಲ್ ಮೋಹಿಯುದ್ದಿನ್ ಜುಮ್ಮಾ ಮಸೀದಿಯ ಅಧ್ಯಕ್ಷ ಇಬ್ರಾಹಿಂ ಮುಸ್ಲಿಯಾರ್ ಹೇಳಿದರು.
ಲೋಕ ಪ್ರವಾದಿ ಮೊಹಮ್ಮದರ 1499 ಜನ್ಮದಿನ ಸಂಭ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರವಾದಿ ಮುಹಮ್ಮದ್ ಅವರ ಮಾನವೀಯತೆ ಹಾಗೂ ಚಾರಿತ್ರ್ಯದ ಮೂಲಕ ಸಮಾಜಕ್ಕೆ ತೋರಿಸಿಕೊಟ್ಟಿರುವ ಸಂದೇಶಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ಪ್ರತಿಯೊಬ್ಬರೂ ಮಾಡಬೇಕು ಎಂದು ಹೇಳಿದರು.
ಪ್ರವಾದಿ ಮೊಹಮ್ಮದರ ಜೀವನ ತೆರೆದ ಗ್ರಂಥವಾಗಿದೆ.ಅವರ ನಾಯಕತ್ವ ಕೇವಲ ಧಾರ್ಮಿಕ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ರಾಜಕೀಯ, ಸಾಮಾಜಿಕ, ಆರ್ಥಿಕ, ಶಿಕ್ಷಣ ಕ್ಷೇತ್ರಗಳಲ್ಲೂ ಮಾದರಿಯಾಗಿದ್ದರು. ಮೂಢನಂಬಿಕೆ, ಕಂದಾಚಾರಗಳಲ್ಲಿ ಮುಳುಗಿದ್ದ ಅರೇಬಿಯಾದ ಜನರನ್ನು ಸರಿದಾರಿಗೆ ತರಲು ಪ್ರಯತ್ನಿಸಿ ಅನೇಕ ಗಂಡಾಂತರ ಎದುರಿಸಿ ಯಶಸ್ವಿಯಾದರು ಎಂದು ವಿವರಿಸಿದರು.
ಮದ್ಯಪಾನ, ಜೂಜು, ಬಡ್ಡಿ, ವ್ಯಭಿಚಾರ, ಲಂಚವನ್ನು ನಿಷೇಧಿಸಿದ್ದರು, ಎಲ್ಲ ಬಗೆಯ ಕೆಡುಕು ಮತ್ತು ಅನಾಚಾರಗಳಿಂದ ಮುಳುಗಿದ್ದ ಸಮಾಜವನ್ನು ವಿಶ್ವಕ್ಕೆ ಮಾದರಿಯಾಗುವ ರೀತಿಯಲ್ಲಿ ಕಟ್ಟಿದ್ದರು. ವ್ಯಾಪಾರ ವಹಿವಾಟಿನಲ್ಲಿ ಪ್ರಾಮಾಣಿಕತೆ ತಂದಿದ್ದರು. ಪರಸ್ಪರ ಕಿತ್ತಾಡುತ್ತಿದ್ದ ವಿವಿಧ ಪಂಗಡಗಳ ನಡುವೆ ಶಾಂತಿ, ಸೌಹಾರ್ದ ಮೂಡಿಸಿದ್ದರು. ಇಡೀ ಅರೇಬಿಯಾದ ಆಡಳಿತ ತಮ್ಮ ಕೈಗೆ ಬಂದರೂ ಜನರ ಮಧ್ಯೆ, ಸಾಮಾನ್ಯನಂತೆ ಬದುಕಿದ್ದರು.
ಧರ್ಮ, ಮೈಬಣ್ಣ, ಪ್ರಾದೇಶಿಕತೆಯ ಆಧಾರದಲ್ಲಿ ಮನುಷ್ಯರ ನಡುವೆ ಮೇಲು–ಕೀಳು ಇಲ್ಲ ಎಂಬುದನ್ನು ಸಾರಿದ್ದರು ಎಂದು ಹೇಳಿದರು.
ಕೆಪಿಸಿಸಿ ಸದಸ್ಯ ಹಾಗೂ ಕೊಲ್ಲಹಳ್ಳಿ ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷ ಕೊಲ್ಲಹಳ್ಳಿ ಸಲೀಂ ಮಾತನಾಡಿ, ಗೌರಿ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಈ ಬಾರಿ ಒಟ್ಟೊಟ್ಟಿಗೆ ಬಂದಿದ್ದು ಗೌರಿ ಗಣೇಶ ಹಬ್ಬದ ಹಬ್ಬದ ಸಂದರ್ಭದಲ್ಲಿ ಗ್ರಾಮದ ಎಲ್ಲಾ ಮುಸಲ್ಮಾನರು ಗಣಪತಿ ಪ್ರತಿಷ್ಠಾಪನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರಸಾದಗಳನ್ನು ಸ್ವೀಕರಿಸಿದ್ದರು ಇಂತಹ ಸೌಹಾರ್ದ ಸಮಾಜವನ್ನು ಪ್ರವಾದಿ ಮೊಹಮ್ಮದರ ಬಯಸುತ್ತಿದ್ದರು ಎಂದರು.
ಇಂದು ಈದ್ ಮಿಲಾದ್ ಆಚರಣೆ ಸಂದರ್ಭದಲ್ಲಿ ಹಿಂದು ಬಾಂಧವರು ಮಿಲಾದ್ ರ್ಯಾಲಿ ಸಂದರ್ಭದಲ್ಲಿ ಮನೆಯಿಂದ ಹೊರಬಂದು ರ್ಯಾಲಿಯಲ್ಲಿ ಪಾಲ್ಗೊಳ್ಳುವ ಮೂಲಕ ಭ್ರಾತೃತ್ವ ಹಾಗೂ ಸಹೋದರತೆಯನ್ನು ಜಗಕ್ಕೆ ಸಾರಿದ್ದಾರೆ. ಈ ರೀತಿಯ ಬೆಳವಣಿಗೆಗಳು ಮುಂದಿನ ದಿನಗಳಲ್ಲಿ ದೇಶದ ಉದ್ದಗಲಕ್ಕೂ ಹರಡಲಿ ಎಂದು ಹೇಳಿದರು.
ತಾಲೂಕಿನ ವಿವಿಧೆಡೆ ತಮ್ಮ ತಮ್ಮ ಮಸೀದಿಯಲ್ಲಿ ಬೆಳಗಿನ ಜಾವ ವಿಶೇಷ ಪ್ರಾರ್ಥನೆ ಸಲ್ಲಿಸಿ ಮಸೀದಿಯ ಪರಿಸರದಲ್ಲಿ ನಬಿ ದಿನದ ಬಗ್ಗೆ ಜಾಥಾ ಹಮ್ಮಿಕೊಂಡಿದ್ದರು. ಮಕ್ಕಳ ದಫ್ ಕಾರ್ಯಕ್ರಮ ನೋಡುಗರ ಮನಸೆಳೆಯಿತು.