ಡಿ.೮ ರಿಂದ ಸರ್ಕಾರಿ ನೌಕರರ ಮೂರು ದಿನಗಳ ಜಿಲ್ಲಾ ಮಟ್ಟದ ಕೋ ಆಪರೇಟಿವ್ ಕಪ್ ಕ್ರಿಕೆಟ್ ಪಂದ್ಯಾವಳಿ; ಕೆ.ಎಂ.ಶ್ರೀನಿವಾಸ್

ನೌಕರರ ಸಂಘ ಹೊರ ತಂದಿರುವ ೨೦೨೪ರ ಹೊಸ ಕ್ಯಾಲೆಂಡರ್‌ನ್ನು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಬಾಳ್ಳು ಗೋಪಾಲ್ ಬಿಡುಗಡೆ ಮಾಡಿದರು.

ಹಾಸನ: ಜಿಲ್ಲಾ ಸರ್ಕಾರಿ, ಅರೆ ಸರ್ಕಾರಿ ಹಾಗೂ ನಿಗಮ ಮಂಡಳಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ಮತ್ತು ಜಿಲ್ಲಾ ರಾಜ್ಯ ಸರ್ಕಾರಿ ನೌಕರರ ಕೋ ಆಪರೇಟಿವ್ ಸೊಟೈಟಿ ವತಿಯಿಂದ ಡಿ.೮ ರಿಂದ ಮೂರು ದಿನಗಳ ಕಾಲ ಜಿಲ್ಲಾ ಮಟ್ಟದ ಕೋ ಆಪರೇಟಿವ್ ಕಪ್ ಕ್ರಿಕೆಟ್ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷ ಕೆ.ಎಂ.ಶ್ರೀನಿವಾಸ್ ತಿಳಿಸಿದರು.
ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಗರ ಹಾಗೂ ಜಿಲ್ಲೆಯ ಒಟ್ಟು ೨೭ ತಂಡಗಳು ಕ್ರೀಡಾಕೂಟದಲ್ಲಿ ಭಾಗಿಯಾಗುತ್ತಿವೆ. ಸರ್ಕಾರಿ ನೌಕರರು ಮಾತ್ರ ಭಾಗಿಯಾಗಬೇಕು ಎಂದರು.
ಮೂರು ದಿನಗಳ ಕಾಲ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ. ಆರಂಭದ ದಿನ ಬೆಳಗ್ಗೆ ೧೦ ಗಂಟೆಗೆ ಜಿಲ್ಲಾಧಿಕಾರಿ ಸತ್ಯಭಾಮ ಸಿ. ಅವರು ಪಂದ್ಯಾವಳಿಗೆ ಚಾಲನೆ ನೀಡುವರು. ಎಸ್ಪಿ ಮೊಹಮದ್ ಸುಜೀತಾ, ಸಿಇಒ ಬಿ.ಆರ್.ಪೂರ್ಣಿಮಾ, ಎಡಿಸಿ ಶಾಂತಲಾ ಕೆ.ಟಿ. ಮೊದಲಾದ ಅಧಿಕಾರಿಗಳು ಭಾಗಿಯಾಗುವರು. ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆಗೆ ಅಂತಾರಾಷ್ಟಿçÃಯ ಕ್ರಿಕೆಟ್ ಆಟಗಾರ ಡೇವಿಡ್ ಜಾನ್ಸನ್, ರಣಜಿ ಮಾಜಿ ಆಟಗಾರ ಎ.ಆರ್.ಮಹೇಶ್ ಮೊದಲಾದವರು ಭಾಗಿಯಾಗಲಿದ್ದಾರೆ ಎಂದು ಹೇಳಿದರು.
ವಿಜೇತ ಮೂರು ತಂಡಗಳಿಗೆ ನಗದು ಬಹುಮಾನ ಜೊತೆಗೆ ಟ್ರೋಫಿ ನೀಡಲಾಗುವುದು. ಜೊತೆಗೆ ಬೆಸ್ಟ್ ಬ್ಯಾಟರ್, ಬೌಲರ್‌ಗೆ ಪ್ರತ್ಯೇಕ ಬಹುಮಾನ ಇದೆ ಎಂದು ತಿಳಿಸಿದರು.
ನಮ್ಮ ಸೊಸೈಟಿ ಈ ವರೆಗೆ ಕಡಿಮೆ ಬಡ್ಡಿ ದರದಲ್ಲಿ ಸುಮಾರು ೭೦ ಲಕ್ಷ ರೂ. ಸಾಲ ನೀಡಿದೆ. ನಿವೇಶನ ಒದಗಿಸಿದೆ. ಇದರ ಜೊತೆಗೆ ಸರ್ಕಾರಿ ಶಾಲೆ ಉಳಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ನಿರಂತರವಾಗಿ ಮಾಡಲಾಗುತ್ತಿದೆ. ಮುಂದುವರಿದ ಭಾಗವಾಗಿ ಸರ್ಕಾರಿ ನೌಕರರ ಕ್ರೀಡಾಸ್ಫೂರ್ತಿ ಹೆಚ್ಚಿಸಲು ಇದೇ ಮೊದಲ ಬಾರಿಗೆ ಕ್ರೀಡಾಕೂಟ ಆಯೋಜನೆ ಮಾಡಲಾಗುತ್ತಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಎಂ.ಎನ್.ಪರಮೇಶ್, ಉಪಾಧ್ಯಕ್ಷ ಹೆಚ್.ಆರ್.ಭೈರಪ್ಪ, ಗೌರವಾಧ್ಯಕ್ಷ ಹೆಚ್.ಆರ್.ಯಶೋಧರ, ರಾಜಶೇಖರಪ್ಪ, ವಿಶ್ವನಾಥ ಇದ್ದರು.
ಇದೇ ವೇಳೆ ನೌಕರರ ಸಂಘ ಹೊರ ತಂದಿರುವ ೨೦೨೪ರ ಹೊಸ ಕ್ಯಾಲೆಂಡರ್‌ನ್ನು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಬಾಳ್ಳು ಗೋಪಾಲ್ ಬಿಡುಗಡೆ ಮಾಡಿದರು.