ಸಕಲೇಶಪುರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಪ್ರಸಾದ್ ರಕ್ಷಿದಿ ಆಯ್ಕೆ: ಕಸಾಪ ತಂಡದಿಂದ ಅಧಿಕೃತ ಆಮಂತ್ರಣ

ಸಮ್ಮೇಳನ ಎನ್ನುವುದು ಕನ್ನಡ ಹಬ್ಬ, ಅದೊಂದು ಜಾತ್ರೆ ಕನ್ನಡದ ನಿರಂತರತೆ ಮತ್ತು ಅಸ್ಮಿತೆಯನ್ನು ಉಳಿಸಿಕೊಳ್ಳುವ ದೊಡ್ಡ ಜವಾಬ್ದಾರಿಯೂ ಹೌದು. ಹಾಗಾಗಿ ಆ ಜವಾಬ್ದಾರಿ ಹೊರಬೇಕಾದವರಲ್ಲಿ ನಾನೂ ಕೂಡ ಒಬ್ಬ ಎಂದು ಒಪ್ಪಿಕೊಂಡಿದ್ದೇನೆ ಎಂದ ಪ್ರಸಾದ್ ರಕ್ಷಿದಿ

ಸಕಲೇಶಪುರ: ನಾಲ್ಕನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಹಿರಿಯ ಸಾಹಿತಿ, ರಂಗಕರ್ಮಿ ಪ್ರಸಾದ್ ರಕ್ಷಿದಿ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ  ಆಮಂತ್ರಣ ನೀಡಲಾಯಿತು.

ಸಕಲೇಶಪುರ ತಾಲೂಕು ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳ ಡಿಸೆಂಬರ್ 13 ರ ಶುಕ್ರವಾರ ಪಟ್ಟಣದ ಗುರುವೇಗೌಡ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದು, ಸಮ್ಮೇಳನದ ಸರ್ವಾಧ್ಯಕ್ಷರಾಗಿ ರಂಗಕರ್ಮಿ, ಸಾಹಿತಿ ಪ್ರಸಾದ್ ರಕ್ಷಿದಿ ಅವರನ್ನು ಆಯ್ಕೆ ಮಾಡಲು ಕಸಾಪ ತಾಲೂಕು ಘಟಕದ ಕಾರ್ಯಕಾರಿ ಸಮಿತಿ ತೀರ್ಮಾನಿಸಿತು.

ಈ ಹಿನ್ನೆಲೆಯಲ್ಲಿ ಸೋಮವಾರ ನಿವಾಸಕ್ಕೆ ತೆರಳಿ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕು ಎಂದು ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷೆ ಶಾರದಾ ಗುರುಮೂರ್ತಿ ಹಾಗೂ ಪದಾಧಿಕಾರಿಗಳು ರಕ್ಷಿದಿಯಲ್ಲಿನ ಅವರ ಮನೆಗೆ ತೆರಳಿ ಶಾಲು, ಏಲಕ್ಕಿ ಹಾರ, ಮೈಸೂರು ಪೇಟ ತೊಡಿಸಿ ಆತ್ಮೀಯವಾಗಿ ಆಮಂತ್ರಣ ನೀಡಿದರು.

ನಂತರ ಮಾತನಾಡಿದ ಶಾರದಾ ಗುರುಮೂರ್ತಿ, ರಂಗ ಚಟುವಟಿಕೆ, ಸಾಹಿತ್ಯ ರಚನೆ ಹಾಗೂ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುಚ ಪ್ರಸಾದ್ ರಕ್ಷಿದಿ ಅವರನ್ನು ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಪರಿಷತ್ತಿನ ಘನತೆಯನ್ನು ಹೆಚ್ಚಿಸುತ್ತದೆ ಎಂದರು .

ಆಮಂತ್ರಣ ಸ್ವೀಕರಿಸಿ ಮಾತನಾಡಿದ ಪ್ರಸಾದ್ ರಕ್ಷಿದಿ, ಸಮ್ಮೇಳನ ಎನ್ನುವುದು ಕನ್ನಡ ಹಬ್ಬ, ಅದೊಂದು ಜಾತ್ರೆ ಕನ್ನಡದ ನಿರಂತರತೆ ಮತ್ತು ಅಸ್ಮಿತೆಯನ್ನು ಉಳಿಸಿಕೊಳ್ಳುವ ದೊಡ್ಡ ಜವಾಬ್ದಾರಿಯೂ ಹೌದು. ಹಾಗಾಗಿ ಆ ಜವಾಬ್ದಾರಿಯ ಹೊರಬೇಕಾದವರಲ್ಲಿ ನಾನೂ ಕೂಡ ಒಬ್ಬ ಎಂದು ಒಪ್ಪಿಕೊಂಡಿದ್ದೇನೆ. ಸಮ್ಮೇಳನ ಅಂದರೆ ಅಧ್ಯಕ್ಷರು ಅಂತ ಒಬ್ಬರು ಇರತ್ತಾರೆ ಅಂದ ಮಾತ್ರಕ್ಕೆ ಎಲ್ಲವೂ ಅಧ್ಯಕ್ಷರೇ ಅಲ್ಲ. ಅವರು ಉತ್ಸವ ಮೂರ್ತಿಗಳಾಗಿರುತ್ತಾರೆ ಅಷ್ಟೇ. ಇದಕ್ಕೆ ಸಕಲೇಶಪುರದ ಎಲ್ಲ ಜನತೆ ಸಹಕಾರ ನೀಡುವ ಮೂಲಕ ಸಕಲೇಶಪುರದ ಘನತೆಯನ್ನೂ ಹೆಚ್ಚಿಸಬೇಕು. ಕನ್ನಡದ ಅಸ್ಮಿತೆಯನ್ನು ಹೆಚ್ಚಿಸುವ ದೃಷ್ಟಿಯಿಂದ ನಾನು ಸಮ್ಮೇಳನದ್ಯಕ್ಷರಾಗಲು ಒಪ್ಪಿಕೊಂಡಿದ್ದೇನೆ ಎಂದರು.

 ತಾಲೂಕು ಕಸಾಪ ಮಾಜಿ ಅಧ್ಯಕ್ಷ ಜೈ ಭೀಮ್ ಮಂಜು,    ಕಾರ್ಯದರ್ಶಿ ಯೋಗೀಶ್, ಮೀನಾಕ್ಷಿ, ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರಾದ ಅರುಣ್ ರಕ್ಷಿದಿ, ರವಿಕುಮಾರ್, ನಿರ್ವಾಣಯ್ಯ, ನಲ್ಲುಲಿ ಸತೀಶ್ ,ರಾಕೇಶ್ ಮೆನೇಜಸ್, ಪಿಡಿಓ ಗಿರೀಶ್, ಕ್ಯಾಮನಹಳ್ಳಿ ರಾಜ್‌ಕುಮಾರ್, ಸಾ.ಸು.ವಿಶ್ವನಾಥ್, ಚೇತನ್, ಜಗದೀಶ್, ಪ್ರಸಾದ್ ರಕ್ಷಿದಿ ಅವರ ಶ್ರೀಮತಿ ರಾಧ ಇದ್ದರು.