ಹಾಸನ: ಗೋಮಾಂಸ ಮಾರಾಟಕ್ಕಾಗಿ 60 ಕ್ಕೂ ಹೆಚ್ಚು ಗೋವುಗಳನ್ನು ವಧಿಸಿದ್ದ ಅಕ್ರಮ ಕಸಾಯಿಖಾನೆ ಮೇಲೆ ಪೊಲೀಸರು ದಾಳಿ ಮಾಡಿ ಐದು ಗೋವುಗಳನ್ನು ರಕ್ಷಿಸಿ 10 ಟನ್ ಗೋಮಾಂಸ ವಶಪಡಿಸಿಕೊಂಡಿರುವ ಘಟನೆ ಚನ್ನರಾಯಪಟ್ಟಣದ, ಬಾಗೂರು ರಸ್ತೆಯಲ್ಲಿ ನಡೆದಿದೆ.
ಗೋಮಾಂಸ ಮಾಡಲು ಅಕ್ರಮವಾಗಿ ಗೋವುಗಳ ಹತ್ಯೆ ಮಾಡಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ ಪೊಲೀಸರು ದಾಳಿ ಮಾಡಿದ್ದಾರೆ.
ದಾಳಿ ವೇಳೆ ಗೋಮಾಂಸ ಮಾರಾಟಕ್ಕಾಗಿ ಸುಮಾರು 60 ಕ್ಕೂ ಗೋವುಗಳನ್ನು ಹತ್ಯೆ ಮಾಡಿ ನೇತು ಹಾಕಿರುವುದು ಪತ್ತೆಯಾಯಿತು. ಪೊಲೀಸರು ಐದು ಗೋವುಗಳು ರಕ್ಷಣೆ ಮಾಡಿದ್ದಾರೆ.
ಮಹಮದ್ ಅಬ್ದುಲ್ ಹಕ್ ಎಂಬುವವರು ಅಕ್ರಮ ಕಸಾಯಿ ಖಾನೆ ನಡೆಸುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ಮಾಡಿದರು. ಅವರನ್ನು ಕಂಡು ಕಸಾಯಿ ಖಾನೆ ಕೆಲಸಗಾರರು ಅಲ್ಲಿಂದ ಪರಾರಿಯಾದರು.
ಹತ್ಯೆ ಮಾಡಿದ ಗೋವುಗಳ ರಕ್ತವನ್ನು ಕೆರೆಗೆ ಹರಿಸುತ್ತಿರುವುದೂ ಪತ್ತೆಯಾಗಿದೆ. ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.