ಹಾಸನ: ಸಕಲೇಶಪುರ ತಾಲ್ಲೂಕಿನ ಕುನಿಗನಹಳ್ಳಿ ಗ್ರಾಮದಿಂದ ಬುಧವಾರ ನಾಪತ್ತೆಯಾದ ಮೂವರು ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.
ಶರತ್ (16), ಧನಂಜಯ್ (16), ಮುರುಳಿ (16) ಎಂಬ ಮೂವರು ಬಾಲಕರು ಮೊದಲು ಮೈಸೂರಿನಲ್ಲಿ ತಂಗಿದ್ದು, ನಂತರ ಬೆಂಗಳೂರಿಗೆ ತೆರಳಿದ್ದರು.
ಮೈಸೂರಿನಲ್ಲಿ ಬಾಲಕರಿರುವ ಬಗ್ಗೆ ಮಾಹಿತಿ ಪಡೆದ ಸಕಲೇಶಪುರ ಗ್ರಾಮಾಂತರ ಪೊಲೀಸರು ನಿನ್ನೆ ಮೈಸೂರಿಗೆ ತೆರಳಿ, ಹಲವೆಡೆ ಹುಡುಕಾಟ ನಡೆಸಿದರು. ಆದರೆ, ಮಕ್ಕಳು ಮೈಸೂರಿನಿಂದ ಬೆಂಗಳೂರಿಗೆ ತೆರಳಿರುವುದು ಖಚಿತವಾದ ನಂತರ, ಪೊಲೀಸರು ಬೆಂಗಳೂರಿಗೆ ಹೋದರು.
ನಿನ್ನೆ ರಾತ್ರಿ ಖಚಿತ ಮಾಹಿತಿ ಮೇರೆಗೆ ಬೆಂಗಳೂರಿನ ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಓರ್ವ ವಿದ್ಯಾರ್ಥಿಯನ್ನು ವಶಕ್ಕೆ ಪಡೆದ ಪೊಲೀಸರು, ಆತನ ವಿಚಾರಣೆ ಮೂಲಕ ಉಳಿದ ಇಬ್ಬರು ವಿದ್ಯಾರ್ಥಿಗಳು ಸಂಬಂಧಿಕರ ಮನೆಯಲ್ಲಿರುವುದು ಪತ್ತೆಹಚ್ಚಿದರು.
ಮೂರೂ ಮಕ್ಕಳನ್ನು ವಶಕ್ಕೆ ಪಡೆದ ನಂತರ, ಅವರನ್ನು ಪೋಷಕರ ವಶಕ್ಕೆ ನೀಡಲಾಯಿತು. ತಮ್ಮ ಮಕ್ಕಳು ಪತ್ತೆಯಾಗಿದ್ದರಿಂದ ಪೋಷಕರು ನಿಟ್ಟುಸಿರು ಬಿಡುತ್ತಿದ್ದು, ಈ ಪ್ರಕರಣ ಸುಖಾಂತ್ಯಗೊಂಡಿದೆ.
ಮೂರು ವಿದ್ಯಾರ್ಥಿಗಳು ಇಂಗ್ಲಿಷ್ ಪೂರ್ವ ಸಿದ್ಧತಾ ಪರೀಕ್ಷೆ ಬರೆಯುವುದನ್ನು ತಪ್ಪಿಸಿಕೊಳ್ಳಲು ಊರು ಬಿಟ್ಟು ಹೋಗಿದ್ದಾಗಿ ತಿಳಿಸಿದ್ದಾರೆ.