ಸೂರಜ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ವೈದ್ಯಕೀಯ ಪರೀಕ್ಷೆಗಾಗಿ ಸಂತ್ರಸ್ತ ಬೆಂಗಳೂರಿಗೆ

ಹಾಸನ: ವಿಧಾನ ಪರಿಷತ್ ಸದಸ್ಯ ಡಾ.ಸೂರಜ್‌ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿ ದೂರು ದಾಖಲಿಸಿರುವ ಸಂತ್ರಸ್ತ ಯುವಕನನ್ನು ಪೊಲೀಸರು ವೈದ್ಯಕೀಯ ಪರೀಕ್ಷೆಗಾಗಿ ಬೆಂಗಳೂರಿಗೆ ಕರೆದೊಯ್ದಿದ್ದಾರೆ.

ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಯುವಕ ದೂರು ನೀಡಿರುವುದರಿಂದ ವೈದ್ಯಕೀಯ ಪರೀಕ್ಷೆ, ಸಾಕ್ಷ್ಯ ಸಂಗ್ರಹ ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ಹೊಳೆನರಸೀಪುರ ಗ್ರಾಮಾಂತರ ಠಾಣೆ ಪೊಲೀಸರು ಸಂತ್ರಸ್ತನನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಇಂದು ಸಂಜೆ ಡಾ.ಸೂರಜ್‌ರೇವಣ್ಣ ವಿರುದ್ಧ ದೂರು ಸಂತ್ರಸ್ತ ದೂರು ನೀಡಿದ್ದು, ಅದರ ಆಧಾರದಲ್ಲಿ ಹೊಳೆನರಸೀಪುರ ಗ್ರಾಮಾಂತರ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.