ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ಹಿರೇಶಿಗರ ಗ್ರಾಮದ ಬಳಿ ಸುಮಾರು 2,000 ಲೀಟರ್ ಪೆಟ್ರೋಲ್ ತುಂಬಿದ್ದ ಲಾರಿಯೊಂದನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಮಂಗಳೂರು-ಹಾಸನ ಪೆಟ್ರೋಲ್ ಪೈಪ್ ಲೈನ್‌ಗೆ ಕಳ್ಳರು ಕನ್ನ ಹಾಕಿರುವ ಸಂಶಯ ಮೂಡಿದೆ.
ಗೋಣಿಬೀಡು ಠಾಣಾ ವ್ಯಾಪ್ತಿಯಲ್ಲಿ ನಂಬರ್ ಪ್ಲೇಟ್ ಇಲ್ಲದ ಲಾರಿಯೊಂದನ್ನು ಪೊಲೀಸರು ಪತ್ತೆ ಮಾಡಿದ್ದು, ಆರೋಪಿಗಳು ಲಾರಿಯನ್ನು ಬಿಟ್ಟು ಪರಾರಿಯಾಗಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ, ಮೂಡಿಗೆರೆ ತಾಲೂಕಿನಲ್ಲಿ ಯಾವುದೇ ಪೆಟ್ರೋಲ್ ಪೈಪ್‌ಲೈನ್ ಗೆ ರಂಧ್ರ ಕೊರೆಯಲಾಗಿಲ್ಲ ಎಂದು ತಿಳಿದುಬಂದಿದೆ. ಬೇರೆ ಕಡೆಯಿಂದ ಪೈಪ್‌ಲೈನ್ ಕೊರೆದು ಪೆಟ್ರೋಲ್ ಕದ್ದು ಈ ಲಾರಿಯಲ್ಲಿ ಸಾಗಿಸುತ್ತಿದ್ದಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಗೋಣಿಬೀಡು ಪೊಲೀಸರು ಲಾರಿಯನ್ನು ವಶಕ್ಕೆ ಪಡೆದಿದ್ದು, ಆರೋಪಿಗಳನ್ನು ಪತ್ತೆಹಚ್ಚಲು ಬಲೆ ಬೀಸಿದ್ದಾರೆ. ಈ ಹಿಂದೆ ಹಾಸನ ಜಿಲ್ಲೆಯ ಅರೇಹಳ್ಳಿ, ದುದ್ದು ಹೋಬಳಿ ವ್ಯಾಪ್ತಿಯಲ್ಲಿ ಪೈಪ್ ಲೈನ್ ಗೆ ರಂಧ್ರ ಕೊರೆದು ಇಂಧನ ಕಳವು ಮಾಡುವ ಅವ್ಯಾಹತ ದಂಧೆ ಬಯಲಾಗಿತ್ತು.

ಎಂಆರ್ಪಿಎಲ್ ಕಳವು ತಡೆಗೆ ಸೆನ್ಸರ್ ಅಳವಡಿಕೆ ಹಾಗೂ ನಿಗಾದಂತಹ ಕ್ರಮಗಳನ್ನು ಬಿಗಿಗೊಳಿಸಿದ ನಂತರ ಕಳವು ಪ್ರಕರಣಗಳು ನಿಂತಿದ್ದವು. ಈಗ ಪುನಃ ಅದೇ ದಂಧೆ ಸಕ್ರಿಯವಾಗಿದೆಯೇ ಎನ್ನುವ ಸಂಶಯ ಮೂಡಿದೆ.









