ಹಾಸನ, ಡಿಸೆಂಬರ್ 26: ಅರಸೀಕೆರೆ ತಾಲ್ಲೂಕಿನ ಕಾಟೀಕೆರೆ ಗ್ರಾಮದಲ್ಲಿ ಗಾಂಜಾ ಸೊಪ್ಪು ಮಾರಾಟಕ್ಕೆ ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ದಾಳಿಯಲ್ಲಿ 3 ಲಕ್ಷ ರೂಪಾಯಿಗಳ ಮೌಲ್ಯದ 15 ಕೆ.ಜಿ. ಗಾಂಜಾ ಸೊಪ್ಪು ವಶಪಡಿಸಿಕೊಳ್ಳಲಾಗಿದೆ.
ಪ್ರಜ್ವಲ್, ಪೃಥ್ವಿ ಮತ್ತು ಗಗನ್ ಬಂಧಿತ ಆರೋಪಿಗಳು. ಅವರು ಅಕ್ರಮವಾಗಿ ಜಮೀನಿನಲ್ಲಿ ಬೆಳೆದ ಗಾಂಜಾ ಸೊಪ್ಪು ಕಿತ್ತು ಮಾರಾಟ ಮಾಡಲು ಯತ್ನಿಸುತ್ತಿದ್ದರು.
ಪೊಲೀಸರ ಕಾರ್ಯಾಚರಣೆ: ಖಚಿತ ಮಾಹಿತಿಯ ಮೇರೆಗೆ ಇನ್ಸ್‌ಪೆಕ್ಟರ್ ಚಂದ್ರಶೇಖರ್ ಅವರ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ದಾಳಿಯಲ್ಲಿ ಆರೋಪಿಗಳು ಬಳಸುತ್ತಿದ್ದ ಮೂರು ದ್ವಿಚಕ್ರ ವಾಹನಗಳು, ಒಂದು ಮೊಬೈಲ್ ಫೋನ್ ಮತ್ತು ಗಾಂಜಾ ಸೊಪ್ಪು ವಶಪಡಿಸಿಕೊಳ್ಳಲಾಗಿದೆ.
ಹೊಸ ವರ್ಷ ಆಚರಣೆ ಪಾರ್ಟಿಗಳಲ್ಲಿ ಮತ್ತೇರಿಸಲು ಈ ಗಾಂಜಾ ಮಾರಾಟ ಮಾಡಲು ಆರೋಪಿಗಳು ಸಿದ್ಧತೆ ನಡೆಸಿದ್ದರು ಎನ್ನಲಾಗಿದೆ.
ಪ್ರಕರಣ ದಾಖಲು: ಈ ಸಂಬಂಧ ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಮುಂದುವರಿದಿದೆ.