ಹಾಸನ: ಉಪಚುನಾವಣೆ ಘೋಷಣೆ ಆಗಿ ನಾಮಪತ್ರ ಸಲ್ಲಿಕೆಯೂ ಮುಗಿದಿದೆ. ಚನ್ನಪಟ್ಟಣ ರಾಜ್ಯ ಮಾತ್ರವಲ್ಲದೇ ದೇಶದ ಗಮನ ಸೆಳೆಯುವುದನ್ನ ಕಂಡಿದ್ದೇನೆ. ವಿರೋಧಿಗಳ ಹೇಳಿಕೆಯನ್ನೂ ಗಮನಿಸಿದ್ದು ಅವರಿಗೆ ಜನರೇ ಉತ್ತರ ಕೊಡುತ್ತಾರೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಪತ್ನಿ ಅನಿತಾ ಅವರೊಂದಿಗೆ ಹಾಸನಾಂಬೆ ದರ್ಶನ ಪಡೆದ ನಂತರ ಶಾಸಕ ಸ್ವರೂಪ್ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಜನರು ನಿಖಿಲ್ ಅವರನ್ನು ಅಭಿಮನ್ಯು ಮಾಡುವುದಿಲ್ಲ ಅರ್ಜುನನ ಪಾತ್ರ ಕೊಡ್ತಾರೆ. ಏನೇ ಕುತಂತ್ರ ಮಾಡಿದರೂ ಕೂಡ ಜನರು ನಿಖಿಲ್‌ನನ್ನು ಗೆಲ್ಲಿಸುತ್ತಾರೆ ಎಂದರು.
ಸಹೋದರರು ನಿಲ್ಲಿಸಿಕೊಂಡಿರುವ ಅಭ್ಯರ್ಥಿ ಹಾಗೂ ಅವರು ಪರಸ್ಪರ ಏನು ಚರ್ಚೆ ಮಾಡಿಕೊಂಡಿದ್ದರು ಎಂದು ಗಮನಿಸಿದರೆ ಸಾಕು ಜನರೇ ತೀರ್ಮಾನ ಮಾಡ್ತಾರೆ ಎಂದರು.
ಜಿಎಸ್‌ಟಿ ಹಂಚಿಕೆ ವಿಚಾರದಲ್ಲಿ ಗೊಂದಲದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದು ನೀವೇ ಮಾಡಿದ್ದು, ಆಗ ಇದು ಅರ್ಥ ಆಗಿರಲಿಲ್ಲವೇ? ಮನಮೋಹನ್ ಸಿಂಗ್, ಚಿದಂಬರಂ ಅವರೆಲ್ಲಾ ಕುಳಿತೇ ಮಾಡಿದ್ದಲ್ಲವಾ? ಆಗ ಈ ಸಮಸ್ಯೆ ಆಗುತ್ತೆ ಎಂದು ಗೊತ್ತಿರಲಿಲ್ಲವೇ? ಎಂದು ಪ್ರಶ್ನಿಸಿದರು.
ಕೊಟ್ಟ ಅನುದಾನವನ್ನು ಬಳಸಿಕೊಳ್ಳದೆ ಏನೇನೋ ಹೇಳಿದರೆ ಆಗಲ್ಲ. ಬರೀ ಮಾತಾಡಿಕೊಂಡು ಕುಳಿತುಕೊಳ್ಳುವುದಕ್ಕೆ ಆಗುತ್ತದೆಯೇ? ಸಮಸ್ಯೆ ಅರ್ಥ ಮಾಡಿಸಬೇಕಲ್ಲ? ಕೊಟ್ಟ ಕುದುರೆ ಏರದವನು ವೀರನೂ ಅಲ್ಲ, ಶೂರನೂ ಅಲ್ಲ ಅಂತಾ ಹೇಳ್ತಾರಲ್ಲ
ಆ ಮಾತು ನಿಮಗೆ ಅನ್ವಯ ಆಗುತ್ತೆ ಎಂದು ಲೇವಡಿ ಮಾಡಿದರು.
ಕುಮಾರಸ್ವಾಮಿ ಕೇಂದ್ರ ಸಚಿವರಾಗಿ ರಾಜಕೀಯ ಮಾಡ್ತಾರೆ ಎಂಬ ಟೀಕೆಗಳಿಗೆ ಪ್ರತಿಕ್ರಿಯಿಸಿದ ಅವರು, ನಾನು ಮಾಡುವ ಕೆಲಸ ಲೆಕ್ಕ ಕೇಳೋದು ಪ್ರಧಾನಿ.
ಕಾಂಗ್ರೆಸ್ ನಾಯಕರಿಗೆ ನಾನು ಉತ್ತರ ಕೊಡಬೇಕಿಲ್ಲ ಎಂದು ಗುಡುಗಿದರು.
ಅಖಾಡ ಸಿದ್ಧವಾಗಿ ಅಭ್ಯರ್ಥಿ ಘೋಷಣೆ ಆಗಿದೆ.ಬಅದರ ಬಗ್ಗೆ ಈಗ ಮಾತಾಡುವುದು ಬೇಡ, ಯೋಗೇಶ್ವರ್, ಮೈತ್ರಿ ಮಾಡಿಸಿದ್ದು ನಾನೇ, ಕುಮಾರಸ್ವಾಮಿ ಗೆಲ್ಲಿಸಿದ್ದು ನಾನೇ, ಸಿ.ಎನ್. ಮಂಜುನಾಥ್ ಗೆಲ್ಲಿಸಿದ್ದು ನಾನೇ ಅಂತಾರೆ.ಹಾಗಿದ್ದರೆ ಅವರ ಹೈಕಮಾಂಡ್ ನಿಂದ ಬಿ ಫಾರಂ ಪಡೆದು ಯಾಕೆ ಚುನಾವಣೆಗೆ ನಿಲ್ಲಲಿಲ್ಲ? ಎಂದು ಪ್ರಶ್ನಿಸಿದರು.
ಚನ್ನಪಟ್ಟಣದಲ್ಲಿ ನಿಖಿಲ್ ನಾನು ನಿಲ್ಲುತ್ತೇನೆ ಎಂದು ಬಂದಿರಲಿಲ್ಲ. ಅನಿವಾರ್ಯವಾಗಿ ಅವರಿಗೆ ಅಭ್ಯರ್ಥಿ ಪಟ್ಟ ಕಟ್ಟಿದ್ದಾರೆ ಅಷ್ಟೇ. ಅವರು ಚುನಾವಣೆ ಮುಗಿದೇ ಹೋಗಿದೆ ಅಂದುಕೊಂಡಿದ್ದಾರೆ. ಆದರೆ ಚನ್ನಪಟ್ಟಣದಲ್ಲಿ ಜನರು ತೀರ್ಮಾನ ಮಾಡುತ್ತಾರೆ.
ಚನ್ನಪಟ್ಟಣ ಮೊದಲಿಂದಲೂ ಜೆಡಿಎಸ್ ಕೋಟೆ. ಅಲ್ಲಿ ನಮ್ಮಲ್ಲಿನ ಕೆಲ ತಪ್ಪಿನಿಂದ ಹಿನ್ನಡೆ ಆಗಿತ್ತು. ಅದನ್ನು ಸರಿ ಮಾಡಲು ನನ್ನನ್ನು ರಾಮನಗರ ದಿಂದ ಚನ್ನಪಟ್ಟಣಕ್ಕೆ ಕರೆದೊಯ್ದರು. ಈಗ ಎಲ್ಲವೂ ಸರಿಯಾಗಿದೆ ಎಂದರು.
ಕುಮಾರಸ್ವಾಮಿ ಮಗನನ್ನು ಮುಗಿಸಲು ಕಾಂಗ್ರೆಸ್ ನಾಯಕರು ಏನು ಕುತಂತ್ರ ಮಾಡಿದ್ದರೋ ಅದು ಸಾಧ್ಯವಿಲ್ಲ ಎಂದು ಜನ ತೋರಿಸುತ್ತಾರೆ. ಹಾಸನಾಂಬೆ ದರ್ಶನ ಮಾಡಿ ಹೇಳ್ತಾ ಇದ್ದೀನಿ ಬರೆದಿಟ್ಟುಕೊಳ್ಳಿ ಚನ್ನಪಟ್ಟಣದಿಂದ ಅವರ ಅವನತಿ ಆರಂಭವಾಗುತ್ತದೆ ಎಂದು ಡಿಕೆ ಸಹೋದರರಿಗೆ ಟಾಂಗ್ ನೀಡಿದರು.
ಬಿಜೆಪಿ-ಜೆಡಿಎಸ್ ನಡುವೆ ಯಾವುದೇ ಸಮನ್ವಯದ ಕೊರತೆ ಇಲ್ಲ. ಅದಿರುವುದು ಕಾಂಗ್ರೆಸ್‌ನಲ್ಲಿ ಎಂದು ಮೂದಲಿಸಿದರು.
People will show that what the Congress leaders did to finish off Kumaraswamy’s son is not possible HDK said.