ಪಿಕ್ ಪಾಕೆಟರ್ ಕೈಚಳಕಕ್ಕೆ ಸಿಲುಕಿದ ಕಾರ್ಮಿಕ‌ ಮಹಿಳೆ; ಹೃದಯ ಕರಗಿಸಿದ ಮಕ್ಕಳ‌ ಕಣ್ಣೀರು

ಹಾಸನ: ಬಸ್ ಹತ್ತುತ್ತಿದ್ದಾಗ ಕೂಲಿ ಕಾರ್ಮಿಕ‌‌‌ ಮಹಿಳೆಯೊಬ್ಬರು ಕಿಸೆಗಳ್ಳನ ಕೈಚಳಕಕ್ಕೆ ಬಲಿಯಾಗಿ ಇಬ್ಬರು ಮಕ್ಕಳೊಂದಿಗೆ ಕಣ್ಣೀರುಗರೆಯುತ್ತಾ ಕುಳಿತ ಮನಕಲಕುವ ಘಟನೆಗೆ ನಗರದ ಹೊಸ ಬಸ್ ನಿಲ್ದಾಣದಲ್ಲಿನ ಪ್ರಯಾಣಿಕರು ಸಾಕ್ಷಿಯಾದರು.

ವಿಜಯಪುರ ಮೂಲದ, ಅರಕಲಗೂಡು ತಾಲೂಕಿನ ರಾಮನಾಥಪುರದಲ್ಲಿ ಕೂಲಿ ಕಾರ್ಮಿಕಳಾಗಿ ದುಡಿಯುತ್ತಿರುವ ಭಾರತಿ ಹಣ ಕಳೆದುಕೊಂಡ ಮಹಿಳೆ.

ಬೆಳಗ್ಗೆ ಕುಂದಾಪುರಕ್ಕೆ ತೆರಳಿ ಅಲ್ಲಿ ವ್ಯಾಸಂಗ ಮಾಡುತ್ತಿದ್ದ ತನ್ನಿಬ್ಬರು ಮಕ್ಕಳನ್ನು ಹಾಸನಕ್ಕೆ ಕರೆತಂದ ಆಕೆ ನಗರ ಬಸ್ ನಿಲ್ದಾಣದಲ್ಲಿ ರಾಮನಾಥಪುರಕ್ಕೆ ತೆರಳಲು KA-13, F-2091 ನಂಬರ್‌ನ ಬಸ್ ಹತ್ತುತ್ತಿದ್ದರು.

ಆಗ ಅವರ ಪರ್ಸ್ ನಲ್ಲಿದ್ದ ಹದಿನೈದು ಸಾವಿರ ರೂ. ನಗದನ್ನು ಕಳ್ಳನೊಬ್ಬ ಎಗರಿಸಿದ್ದ. ಅದು ಅರಿವಿಗೆ ಬಂದ ತಕ್ಷಣ ಬಸ್ಸಿಂದ ಮಕ್ಕಳೊಂದಿಗೆ ಕೆಳಗಿಳಿದ ಮಹಿಳೆ ಕೂಲಿ ಮಾಡಿ ಸಂಪಾದಿಸಿದ್ದ ಹಣ ಚೋರನ ಪಾಲಾದ್ದರಿಂದ‌ ಕಂಗಾಲಾದರು.

ನಿಲ್ದಾಣದ ಬೆಂಚ್ ಮೇಲೆ ಕುಳಿತು ಕಣ್ಣೀರು ಹಾಕಲಾರಂಭಿಸಿದರು. ಅದನ್ನು ಕಂಡು ಪುಟ್ಟ‌ ಮಕ್ಕಳಿಬ್ಬರೂ ಗೋಳಿಟ್ಟು ಅತ್ತರು. ಈ ದೃಶ್ಯ ನಿಲ್ದಾಣದಲ್ಲಿದ್ದ ಪ್ರಯಾಣಿಕರ ಕರುಳು ಚುರುಕ್ ಎನ್ನುವಂತೆ ಮಾಡಿತು.

ಕೆಲ ಪ್ರಯಾಣಿಕರು ಜತೆಯಾಗಿ ಮಹಿಳೆಗೆ ಸಮಾಧಾನ ಹೇಳಿ ತಾವೇ ಒಂದಷ್ಟು ಹಣ ಒಟ್ಟು ಮಾಡಿಕೊಟ್ಟು‌ ಆಕೆಯನ್ನು ಮಕ್ಕಳೊಂದಿಗೆ ರಾಮನಾಥಪುರ ಬಸ್ ಗೆ ಹತ್ತಿಸಿ ಕಳಿಸಿದರು.